ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ

ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ

ರಾಗ ಶಂಕರಾಭರಣ/ಆದಿ ತಾಳ ವೇಣುನಾದ ಬಾರೋ ಶ್ರೀ ವೇಂಕಟರಮಣ ಬಾರೋ ಬಾಣನ ಭಂಗಿಸಿದಂಥ ಭಾವಜನಯ್ಯನೆ ಬಾರೋ || ಪಲ್ಲವಿ || ಪೂತನಿಯ ಮೊಲೆಯುಂಡ ನವನೀತ ಚೋರನೆ ಬಾರೋ ಭೀತ ರಾವಣನ ಸಂಹರಿಸಿದ ಸೀತಾನಾಯಕ ಬಾರೋ || ೧ || ಬಿಲ್ಲ ಮುರಿದು ಮಲ್ಲರ ಗೆದ್ದ ಫುಲ್ಲಭನಾಭನೆ ಬಾರೋ ಗೊಲ್ಲತೇರೊಡನೆ ನಲಿವ ಚೆಲುವ ಮೂರುತಿ ಬಾರೋ || ೨ || ಮಂದರಗಿರಿ ಎತ್ತಿದಂಥ ಇಂದಿರೆ ರಮಣನೆ ಬಾರೋ ಕುಂದದೆ ಗೋವುಗಳ ಕಾಯಿದ ಪುಂಡರೀಕಾಕ್ಷನೆ ಬಾರೋ || ೩ || ನಾರಿಯರ ಮನೆಗೆ ಪೋಗುವ ವಾರಿಜನಾಭನೆ ಬಾರೋ ಈರೇಳು ಭುವನನ ಕಾಯುವ ಮಾರಯ್ಯನೆ ಬಾರೋ || ೪ || ಶೇಷ ಶಯನ ಮೂರುತಿಯಾದ ವಾಸುದೇವನೆ ಬಾರೋ ದಾಸರೊಳು ದಾಸನಾದ ಪುರಂದರವಿಠಲನೆ ಬಾರೋ || ೫ || ~~~*~~~ ಬಾಣನ... -- ಬಲಿಚಕ್ರವರ್ತಿಯ ಮಗನಾದ ಬಾಣಾಸುರನ ಮಗಳಾದ ಉಷೆಯನ್ನು, ಅನಿರುದ್ಧನು (ಕೃಷ್ಣನ ಮಗ ಪ್ರದ್ಯುಮ್ನ, ಅವನೇ ಮನ್ಮಥ, ಭಾವಜ; ಅವನ ಮಗ ಅನಿರುದ್ಧ) ಕದ್ದೊಯ್ದು ಮದುವೆಯಾದದ್ದು ಇಲ್ಲಿನ ಸಂದರ್ಭ. ಬಿಲ್ಲ ಮುರಿದು... - ಕಂಸನ ಆಸ್ಥಾನದಲ್ಲಿ. ಗೊಲ್ಲತೇರೊಡನೆ -- ಗೊಲ್ಲತಿಯರೊಡನೆ ; ಕವಾಡಿಗರ ಹೆಂಗೆಳೆಯರನ್ನು ಕೂಡಿಕೊಂಡು. ಈರೇಳು ಭುವನನ - ಹದಿನಾಲ್ಕು ಲೋಕಗಳನ್ನು. [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು