ನೀನಿರಲು ನಮಗೇತರ ಭಯವೋ

ನೀನಿರಲು ನಮಗೇತರ ಭಯವೋ

ರಾಗ ಕಾಪಿ/ಚಾಪು ತಾಳ ನೀನಿರಲು ನಮಗೇತರ ಭಯವೋ ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ || ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ ಭರದಿಂದ ನಿಮ್ಮ ಸ್ತೋತ್ರ ಮಾಡಲು ಹರುಷದಿಂದ ಕೇಳಿ ನಲಿದೈವರ ನಾರಿ ಲಜ್ಜೆಯ ಕಾಯಿದ ಕರುಣ ದಯಾಸಿಂಧು || ೧ || ಕ್ಷುಧೆಯಿಂದ ಬಂದ ಅಗಸ್ತ್ಯಮುನಿ ಶಾಪದಲಿ ಮದುಯುತನಾಗಿ ತಾನು ಗಜನಾಗಿರೆ ಅಘಟವಾಗಿದ್ದ ನೆಗಳಿಗೆ ಸಿಲ್ಕಿ ಧೇನಿಸಲು ನಿಜ ಚಕ್ರದಲಿ ಕಾಯಿದ ಗಜರಾಜವರದ || ೨ || ನೀರ ಬೊಬ್ಬುಳಿಯಂತೆ ನಿತ್ಯವಲ್ಲವೊ ದೇಹ ಘೋರ ಸಂಸಾರದೊಳು ತೊಳಲಬೇಡ ಶ್ರೀರಮಣ ಪುರಂದರವಿಠಲ ಪರದೈವನೆಂದು ಸಾರುತಿರಲು ಮನವೆ ಸುಮ್ಮನಿರಲು ಬೇಡ || ೩ || ~~~*~~~ ತಿರುವೇಂಗಳಯ್ಯ - ತಿರುವೇಂಗಡದ ಒಡೆಯ, ವೆಂಕಟಾಚಲಪತಿ. ಚರಣದಿಂದುದಿಸಿದವಳ ಸುತನ... - ಗಂಗೆಯ ಮಗನಾದ ಭೀಷ್ಮನ ಮೊಮ್ಮಗನ ವಾವೆಯಲ್ಲಿದ್ದ ಯುಧಿಷ್ಠಿರನ ಹೆಂಡತಿಯಾದ ದ್ರೌಪದಿಯು. ಭರದಿಂದ - ತುಂಬಿದ ಸಭೆಯಲ್ಲಿ ದು:ಶಾಸನನು ತನ್ನ ಸೀರೆ ಸೆಳೆಯುತ್ತಿರುವಾಗ. ಐವರ ನಾರಿ - ಪಾಂಡವರೈವರ ಹೆಂಡತಿ ದ್ರೌಪದಿ. ಕ್ಷುದೆಯಿಂದ... - ಗಜೇಂದ್ರಮೋಕ್ಷದ ಕಥೆ. ಪಾಂಡ್ಯದೇಶದ ದೊರೆ ಇಂದ್ರದ್ಯುಮ್ನನು ತನ್ನ ಮನೆಗೆ ಬಂದ ಅಗಸ್ತ್ಯರನ್ನು ಅಸಡ್ಡೆಯಿಂದ ಕಂಡನಾಗಿ ಅಗಸ್ತ್ಯನು ಅವನನ್ನು ಆನೆಯಾಗೆಂದು ಶಪಿಸಿ ಹೋದನು. ಧೇನಿಸಲು - ಧ್ಯಾನಿಸಲು. ನೆಗಳು - ಮೊಸಳೆ. ನಿಜ ಚಕ್ರದಲಿ - ತನ್ನ ಚಕ್ರವನ್ನು ಮೊಸಳೆಯೆಡೆಗೆ ಹರಿಹಾಯಿಸಿ. ನೀರ ಬೊಬ್ಬುಳಿ - ನೀರ ಮೇಲಣ ಗುಳ್ಳೆ. [ ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು