ನಾನೇನು ಮಾಡಿದೆನೋ

ನಾನೇನು ಮಾಡಿದೆನೋ

ರಾಗ ಮೋಹನ/ಅಟ್ಟ ತಾಳ ನಾನೇನು ಮಾಡಿದೆನೋ ವೆಂಕಟರಾಯ ನೀನೆನ್ನ ಕಾಯಬೇಕೋ || ಪಲ್ಲವಿ || ಮಾನಾಪಮಾನವು ನಿನ್ನದು ಎನಗೇನು ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ || ರಕ್ಕಸನಲ್ಲವೇನೋ ಪ್ರಹ್ಲಾದನು ಚಿಕ್ಕವ ಧ್ರುವನಲ್ಲವೆ ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ ಅಕ್ಕನ ಮಗನೇನೋ ವೆಂಕಟರಾಯ || ೧ || ಕರಿರಾಯ ಕರೆಸಿದನೆ ದ್ರೌಪದಾದೇವಿ ಬರೆದೋಲೆ ಕಳುಹಿದಳೆ ವರಋಷಿ ಪತ್ನಿ ಕಲ್ಲಾಗಿ ಸ್ತ್ರೀಯಾದದ್ದು ಧರೆಯೆಲ್ಲ ಅರಿಯದೇನೋ ವೆಂಕಟರಾಯ || ೨ || ಒಪ್ಪಿಡಿಯವಲಕ್ಕಿಯ ತಂದವನಿಗೆ ಒಪ್ಪಿ ಕೊಟ್ಟೆಯೊ ಭಾಗ್ಯವ ಸರ್ಪಶಯನ ಶ್ರೀ ಪುರಂದರವಿಠಲ ಅಪ್ರಮೇಯನೆ ಸಲಹೋ ವೆಂಕಟರಾಯ || ೩ || ~~~ * ~~~ ರಕ್ಕಸನಲ್ಲವೇನೋ - ಪ್ರಹ್ಲಾದನು ವಿಷ್ಣು ಭಕ್ತನಾದರೂ ದೈತ್ಯನಾದ ಹಿರಣ್ಯಕಶಿಪುವಿನ ಮಗ; ದೈತ್ಯ ತಾನೆ? ಧ್ರುವ - ಉತ್ತಾನಪಾದರಾಯನ ಮಗ ಸಣ್ಣವನಲ್ಲವೆ? ಆ ಹುಡುಗನಿಗಾಗಿ ನೀನು ಬರಬಹುದೋ? ಅಜಾಮಿಳ - ಕಾನ್ಯಕುಬ್ಜದ ಬ್ರಾಹ್ಮಣನಾದರೂ ದುರಾಚಾರಿಯಲ್ಲವೇ? ಅವನಿಗೆ ನೀನು ಸದ್ಗತಿಯನ್ನಿತ್ತೆಯಲ್ಲ? ಕರಿರಾಜ - ಗಜೇಂದ್ರ, ಇವನು ಇಂದ್ರದುಮ್ನನು ಪಾಂಡ್ಯದೇಶದ ಅರಸಾಗಿ ವಿಷ್ಣು ಭಕ್ತನಾದರೂ ಅಗಸ್ತ್ಯರಿಂದ ಶಾಪ ಪಡೆದು ಆನೆಯಾದನಲ್ಲವೇ? ಅವನು ನಿನ್ನನ್ನೇನು ಕರೆಕಳುಹಿಸಿದನೆ? ಬರಿದೆ ಕೂಗಿದರೂ ಬಂದೆಯಲ್ಲ? ದ್ರೌಪದಾದೇವಿ - ದು:ಶಾಸನನು ತನ್ನನ್ನು ಅಪಮಾನಗೊಳಿಸುತ್ತಿದ್ದಾಗ ದ್ರೌಪದಿಯು ನಿನ್ನನ್ನು ನೆನಸಿಕೋಡಳಷ್ಟೆ; ಅದಕ್ಕೇ ನೀನು ಒಲಿದೆಯಲ್ಲ! ವರಋಷಿಪತ್ನಿ - ಅಹಲ್ಯೆ ; ಗೌತಮನ ಹೆಂಡತಿಯಾದ ಅಹಲ್ಯೆ ಶಾಪದಿಂದ ಕಲ್ಲಗಿರುವಾಗ ರಾಮಾವತಾರದಲ್ಲಿ ಅವಳ ಶಾಪವನ್ನು ನೀಗಿಸಿದೆಯಲ್ಲವೆ? ಒಪ್ಪಿಡಿಯವಲಕ್ಕಿಯ ತಂದವನಿಗೆ - ಕುಚೇಲನಿಗೆ ಒಂದು ಹಿಡಿ ಅವಲಕ್ಕಿಗೆ ಬದಲಾಗಿ ಸಕಲಸಂಪತ್ತನ್ನೂ ನೀನು ನೀಡಲಿಲ್ಲವೇ? [ಪುರಂದರ ಸಾಹಿತ್ಯ ದರ್ಶನ - ಭಾಗ ೧]
ದಾಸ ಸಾಹಿತ್ಯ ಪ್ರಕಾರ
ಬರೆದವರು