ಎನ್ನ ಬಿಂಬ ಮೂರುತಿಯ ಪೂಜಿಸುವೆ

ಎನ್ನ ಬಿಂಬ ಮೂರುತಿಯ ಪೂಜಿಸುವೆ

ರಾಗ - ಕಾಂಬೋದಿ ತಾಳ - ಝಂಪೆ ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು| ಮನಮುಟ್ಟಿ ಅನುದಿನದಿ ಮರೆಯದೇ ಜನರೇ|| ಗಾತ್ರವೇ ಮಂದಿರ ಹೃದಯವೇ ಮಂಟಪ | ಸೂತ್ರವೇ ಮಹದ್ದೀಪ ಹಸ್ತ ಚಾಮರವು || ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ | ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ||೧|| ನುಡಿದ ಶಬ್ದಗಳೆಲ್ಲ ಪುಷ್ಪಂಗಳಾದವು| ನಡೆದುದೆಲ್ಲವೂ ಮಹಾನಾಟ್ಯಂಗಳು || ಉಡುವ ಹೊದ್ದಿಕೆ ಎಲ್ಲಾ ವಿಚಿತ್ರವಾದ ವಸ್ತ್ರ| ತೊಡುವ ಭೂಷಣವೆಲ್ಲ ಶ್ರೀಹರಿಗೆ ಆಭರಣ ||೨|| ಧರಿಸಿದ ಗಂಧವೇ ಚರಣಕ್ಕೆ ಗಂಧವು| ಶಿರದಲ್ಲಿ ಮುಡಿದ ಪುಷ್ಪದ ಮಾಲೆ || ಸ್ಥಿರವಾಗಿ ಕೂಡಿದ ಬುದ್ದಿಯೇ ಆರತಿ | ಅರಿತೊಡಲಿಗೆ ಉಂಬ ಬನ್ನವೇ ನೈವೇದ್ಯ ||೩|| ಎನ್ನ ಸ್ವರೂಪವೆಂಬುದೆ ರನ್ನದ ಕನ್ನಡಿ | ಎನ್ನ ಮನೋವೃತ್ತಿಯೆಂಬುದೇ ಛತ್ರಿಕೆ || ಇನ್ನು ನುಡಿವ ಹರಿನಾಮಾಮೃತವೇ ತೀರ್ಥ | ಎನ್ನ ಮನವೆಂಬುದೇ ಸಿಂಹಾಸನ ||೪|| ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆ ಯಾಕೆ | ಅನ್ಯವಾದ ಮಂತ್ರತಂತ್ರವೇಕೆ || ಎನ್ನಲ್ಲಿ ಭರಿತ ಸಾಧನೆಗಳು ಇರುತಿರಲು | ಚೆನ್ನಾಗಿ ಶ್ರೀ ಕೃಷ್ಣಸ್ವಾಮಿಯ ಪೂಜಿಸುವೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ