ಶ್ರೀಪಾದರಾಯ

ಕಲಿಕಾಲಕೆ ಸಮಯುಗವಿಲ್ಲವಯ್ಯ

ಕಲಿಕಾಲಕೆ ಸಮಯುಗವಿಲ್ಲವಯ್ಯ ಕಲುಷ ಹರಿಸಿ ಕೈವಲ್ಯವೀವುದಯ್ಯ ಸಲೆ ನಾಮಕೀರ್ತನೆ ಸ್ಮರಣೆ ಸಾಕಯ್ಯ ಸ್ಮರಿಸಲು ಸಾಯುಜ್ಯ ಪದವೀವುದಯ್ಯ ಬಲವಂತ ಶ್ರೀರಂಗವಿಠಲನ ನೆನೆದರೆ ಕಲಿಯುಗ ಕೃತಯುಗವಾಗುವುದಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬರದಾಳವನು ಇನಶಶಿಗಳಲ್ಲದೆ

ಅಂಬರದಾಳವನು ಇನಶಶಿಗಳಲ್ಲದೆ ಅಂಬರತಳದಲಾಡುವ ಪಕ್ಷಿ ತಾ ಬಲ್ಲವೆ? ಜಲದ ಪ್ರಮಾಣವ ತಾವರೆಗಳಲ್ಲದೆ ಮೇಲಿದ್ದ ಮರಗಿಡಬಳ್ಳಿಗಳು ತಾವು ಬಲ್ಲವೆ? ಮಾವಿನ ಹಣ್ಣಿನ ರುಚಿ ಅರಗಿಳಿಗಳಲ್ಲದೆ ಚೀರ್ವ ಕಾಗೆಗಳು ತಾವು ಬಲ್ಲವೆ? ನಿನ್ನ ಮಹಿಮೆ ನಿನ್ನ ಭಕ್ತರು ಬಲ್ಲರು, ಮ ತ್ತನ್ಯರೇನು ಬಲ್ಲರಯ್ಯ ? ಭಕ್ತರಾಧೀನನೆ ಭಕ್ತರೊಡೆಯನೆ ಭಕ್ತರ ಸಲಹಯ್ಯ ನಮೋ ರಂಗವಿಠಲಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಾ ನಿನಗೇನೂ ಬೇಡುವದಿಲ್ಲ

(ವಸಂತ ರಾಗ ತ್ರಿಪುಟತಾಳ) ನಾ ನಿನಗೇನೂ ಬೇಡುವದಿಲ್ಲ, ಎನ್ನ ಹೃದಯಕಮಲದೊಳು ನಿಂದಿರೊ ಹರಿಯೆ ||ಪ|| ಶಿರ ನಿನ್ನ ಚರಣದಲ್ಲೆರಗಲಿ, ಎನ್ನ ಚಕ್ಷುಗಳು ನಿನ್ನ ನೋಡಲಿ ಹರಿಯೆ ಕರ್ಣ ಗೀತಂಗಳ ಕೇಳಲಿ , ಎನ್ನ ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಹರಿಯೆ ||೧|| ನಾಲಿಗೆ ನಿನ್ನ ಕೊಂಡಾಡಲಿ, ಎನ್ನ ಕರಗಳೆರಡು ನಿನಗೆ ಮುಗಿಯಲಿ ಹರಿಯೆ ಪಾದ ತೀರ್ಥಯಾತ್ರೆ ಹೋಗಲಿ, ನಿನ್ನ ಧ್ಯಾನ ಎನಗೊಂದು ಕೊಡು ಕಂಡ್ಯ ಹರಿಯೆ ||೨|| ಬುದ್ಧಿ ನಿನ್ನೊಳು ಕುಣಿದಾಡಲಿ, ಎನ್ನ ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ ಭಕ್ತಜನರ ಸಂಗವು ದೊರಕಲಿ , ರಂಗ - ವಿಠಲ ನಿನ್ನ ದಯವಾಗಲಿ ಹರಿಯೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಹರೇ ವೆಂಕಟಶೈಲ ವಲ್ಲಭ

(ನಾದನಾಮಕ್ರಿಯೆ ರಾಗ ಏಕತಾಳ) ಹರೇ ವೆಂಕಟಶೈಲ ವಲ್ಲಭ ಪೊರೆಯಬೇಕು ಎನ್ನ ||ಪ|| ದುರಿತದೂರ ನೀನಲ್ಲದೆ ಧರೆಯೊಳು ಪೊರೆವರ ನಾ ಕಾಣೆ ನಿನ್ನಾಣೆ ||ಅ.ಪ|| ಆರು ನಿನ್ನ ಹೊರತೆನ್ನ ಪೊರೆವರು ನೀರಜಾಕ್ಷ ಹರಿಯೆ ಅ- ಪಾರಮಹಿಮ ಪುರಾಣಪುರುಷ ಘೋರ ದುರಿತಗಳ ದೂರ ಮಾಡಿಸೋ ||೧|| ಇಂದಿರೇಶ ಅರವಿಂದನಯನ ಎನ್ನ ತಂದೆ ತಾಯಿ ನೀನೆ ಹೊಂದಿದವರ ಅಘವೃಂದ ಕಳೆವ ಮಂದರಾದ್ರಿಧರನೇ ಶ್ರೀಧರನೆ ||೨|| ಮಂಗಳಾಂಗ ಮಹನೀಯ ಗುಣಾರ್ಣವ ಗಂಗೋದಿತ ಪಾದ ಅಂಗಜಪಿತ ಅಹಿರಾಜಶಯ್ಯ ಶ್ರೀ ರಂಗವಿಠಲ ದೊರೆಯೇ ಶ್ರೀ ಹರಿಯೇ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

(ಭೈರವಿ ರಾಗ ಆದಿತಾಳ)

 

ಸ್ಮರಿಸಿದವರನು ಕಾಯ್ವ ನಮ್ಮ ಸೂರ್ಯಾನೇಕ ಪ್ರಭಾವ

ಸುರಮುನಿಗಳ ಸಂಜೀವ ಶ್ರೀ ವೆಂಕಟ ನಮ್ಮನು ಪೊರೆವ ||ಪ||

 

ವೈಕುಂಠದಿಂದ ಬಂದು ಶೇಷಾಚಲದಲಿ ನಿಂದು

ಭಕ್ತರ ಪಾಲಿಪೆನೆಂದು ಅಭಯ ದಯಾಕರ ಸಿಂಧು

ಭಕುತಿ ಮುಕುತಿಯೀವ ಮತ್ಕುಲದೇವನೆ

ಸಕಲ ಜನಸೇವಿತ ಘನ ಪರಿಪೂರ್ಣನೆ

ವಿಕಸಿತ ಕಮಲನಯನ ಕಂಜನಾಭನೆ

ಪ್ರಕಟಿತ ಶುಭಕೀರ್ತಿಯಿಂದ ಮೆರೆವನೆ ||೧||

 

ಜ್ಞಾನಿಗಳ ಗೋಚರನೆ ತನ್ನ ಧ್ಯಾನಿಪರ ಮನೋಹರನೆ

ದಾನವರ ಸಂಹರನೆ ಮಹಾದೈನ್ಯಾದಿಗಳುದ್ಧರನೆ

ಆನಂದಮಯನೆ ಅನೇಕಾವತಾರನೆ

ಅನುದಿನ ನೆನೆವರ ಹೃದಯಮಂದಿರನೆ

ಘನಮಾಣಿಕ ಭೂಷಣ ಶೃಂಗಾರನೆ

ತನುವಿನ ಕ್ಲೇಶ ದುರಿತಸಂಹರನೆ ||೨||

ದಾಸ ಸಾಹಿತ್ಯ ಪ್ರಕಾರ
ಬರೆದವರು

ಸುಮ್ಮನೆ ವೈಷ್ಣವನೆಂಬಿರಿ

(ನಾರಾಯಣಿ ರಾಗ ಆದಿತಾಳ) ಸುಮ್ಮನೆ ವೈಷ್ಣವನೆಂಬಿರಿ ಪರ- ಬೊಮ್ಮ ಸುಜ್ಞಾನವನರಿಯದ ಮನುಜನ ||ಪ|| ಮುಖವ ತೊಳೆದು ನಾಮವನಿಟ್ಟೆನಲ್ಲದೆ ಸುಖತೀರ್ಥ ಶಾಸ್ತ್ರವನೋದಿದೆನೆ ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||೧|| ಊರು ಮಾತುಗಳಾಡಿ ದಣಿದೆನಲ್ಲದೆ ನಾರಾಯಣ ಕೃಷ್ಣ ಶರಣೆಂದೆನೆ ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||೨|| ನರೋತ್ತಮರಿಗಧಿಕ ಗಂಧರ್ವರಿಗಧಿಕ ಸುರೇಂದ್ರಗಧಿಕ ಹರಗಧಿಕ ವಿರಿಂಚಿಗಧಿಕ ಸಿರಿಗಧಿಕ ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||೩|| ಜಗತು ಸತ್ಯವೆಂದು ಪಂಚಭೇದವ ತಿಳಿದು ಮಿಗೆ ರಾಗದ್ವೇಷಂಗಲನು ವರ್ಜಿಸಿ ಭಗವಂತನ ಲೀಲೆ ಶ್ರವಣ ಕಥೆಗಳಿಂದ ನಿಗಮಗೋಚರನೆಂದು ತಿಳಿದೆನೇನಯ್ಯ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು

(ಮಾಳವಶ್ರೀ ರಾಗ , ಏಕತಾಳ) ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು ವ್ಯಾಸಮುನಿರಾಯರ ಸಂನ್ಯಾಸದಿರವ ||ಪ|| ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ ದೇಶವ ತಿರುಗಿ ಸಂಚಾರ ಮಾಡುತ ಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನ ಮೋಸಮಾಡಿ ಕಳೆವ ಸಂನ್ಯಾಸಿಗಳ ಸರಿಯೆ ||೧|| ಕೆರೆಬಾವಿ ಪುರ ಅಗ್ರಹಾರಂಗಳ ಮಾಡಿ ಭೂ- ಸುರರೊಂದು ಲಕ್ಷ ಕುಟುಂಬಗಳ ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾ- ಯರ ಗುಣಗಣ ಗಾಂಭೀರ್ಯಾದಿಗಳ ||೨|| ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮ- ಯುಗಳವನರ್ಚಿಸಿ ಭಕುತಿಯಿಂದ ರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರ ರಂಗವಿಠಲನನ್ನು ಬಿಡೆಬಿಡೆನು ಎಂಬ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ

(ಮೋಹನ ರಾಗ , ಛಾಪುತಾಳ) ಸರಸಿಜಾಕ್ಷ ಸರಸದಿಂದ ಸರಸಿಜೋದ್ಭವಗೊಲಿದು ಬಂದ ||ಪ|| ಉರಸಿನ ಮ್ಯಾಲೆ ಸರಸಿಜಾಕ್ಷಿಯನಿರಿಸಿ ಬಂದ ||ಅ.ಪ|| ಧೀರ ಶರಧಿಗಂಭೀರ ವರಘನಸಾರ ಕಸ್ತೂರಿತಿಲಕಧರ ಹೀರ ಮೌಕ್ತಿಕ ಕೇಯೂರ ಧರಿಸಿದ ನವನೀತ ಚೋರ ಬಂದ ||೧|| ನಂದ ಗೋಪಿಗಾನಂದವೂಡಿದ ಕಂದ ಗೋಕುಲದಿ ಬಂದ ಅಂದದಿಂದ ಸೌಂದರಿಯರ ಗೋವಿಂದ ಮುಕುಂದ ||೨|| ಅಂಗನೆಯರ ಕುಚಗಳಾಲಿಂಗನವ ಮಾಡಿ ನವಮೋಹನಾಂಗ ರಂಗವಿಠಲನು ನಮ್ಮಂತರಂಗದೊಳಗಿಹ ಕಲ್ಮಷಭಂಗ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸದ್ದು ಮಾಡಲು ಬ್ಯಾಡವೋ

(ಕಲ್ಯಾಣಿ ರಾಗ ಅಟ್ಟತಾಳ) ಸದ್ದು ಮಾಡಲು ಬ್ಯಾಡವೋ , ನಿನ್ನ ಕಾಲಿಗೆ ಬಿದ್ದು ನಾ ಬೇಡಿಕೊಂಬೆ ||ಪ|| ನಿದ್ದೆಗೆಯ್ಯುವರೆಲ್ಲ ಎದ್ದರೆ ನೀನು ಬಂ- ದಿದ್ದದ್ದು ಕಂಡರೇನೆಂಬುವರೊ ರಂಗ ||ಅ.ಪ|| ಬಳೆ ಘಲ್ಲುಕೆನ್ನದೇನೊ , ಕೈಯ ಪಿಡಿದು ಎಳೆಯದಿರೊ ಸುಮ್ಮನೆ ಮೊಲೆಗಳ ಮೇಲಿನ ಸೆರಗನೆಳೆಯಲು ಕೊ- ರಳ ಪದಕಂಗಳು ಧ್ವನಿಗೆಯ್ಯುವುವೊ ರಂಗ ||೧|| ನಿರುಗೆಯ ಪಿಡಿಯದಿರೊ , ಕಾಂಚಿಯ ದಾಮ ಕಿರುಗಂಟೆ ಧ್ವನಿಗೆಯ್ಯದೆ ಕಿರುದುಟಿಗಳ ನೀನು ಸವಿದು ಚಪ್ಪರಿಸಲು ತರವಲ್ಲ ಗಂಡ ಮತ್ಸರವ ತಾಳುವನಲ್ಲ ||೨|| ನಾಡಮಾತುಗಳೇತಕೊ-ಸಂಗೀತವ ಪಾಡುವ ಸಮಯವೇನೊ ಗಾಡಿಕಾರ ಶ್ರೀರಂಗವಿಠಲನೆ ಪಾಡುಪಂಥಗಳೊಡಗೂಡುವ ಸಮಯದಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ

(ರಾಗ ಧನ್ಯಾಸಿ , ರೂಪಕ ತಾಳ) ವ್ಯರ್ಥವಲ್ಲವೆ ಜನ್ಮ ವ್ಯರ್ಥವಲ್ಲವೆ ||ಪ|| ತೀರ್ಥಪಾದರ ಭಜಿಸಿ ಕೃತಾರ್ಥನಾಗದವನ ಜನ್ಮ ||ಅ.ಪ|| ಅರುಣ ಉದಯದಲ್ಲಿ ಎದ್ದು ಸರಿತದಲಿ ಸ್ನಾನವ ಮಾಡಿ ಅರಳುಮಲ್ಲಿಗೆ ಮಾಲೆ ಹರಿಯ ಚರಣಕರ್ಪಿಸದವನ ಜನ್ಮ ||೧|| ಒಂದು ಶಂಖ ಉದಕ ತಂದು ಚಂದದಿಂದ ಹರಿಗೆ ಎರೆದು ಗಂಧ ಪುಷ್ಪದಿಂದ ಹರಿಯ ವಂದನೆ ಮಾಡದವನ ಜನ್ಮ ||೨|| ಮುಗುಳು ತೆನೆಯಲೆಸೆವ ತುಳಸಿದಳವ ತಂದು ಪ್ರೇಮದಿಂದ ಜಗನ್ಮಯಗೆ ಅರ್ಪಿಸಿ ಕರವ ಮುಗಿದು ಸ್ತುತಿಸದವನ ಜನ್ಮ ||೩|| ಭೋಗಿಶಯನನ ದಿನದಿ ಸಕಲ ಭೋಗಗಳನು ತಾನು ತೊರೆದು ಭಾಗವತರ ಮ್ಯಾಳದಿಂದ ಜಾಗರಣೆ ಮಾಡದವನ ಜನ್ಮ ||೪|| ಜಂಗಮರೊಳಗಧಿಕವನಿಪ ಭಂಗುರ ಮನುಷ್ಯದೇಹ ಪಡೆದು ರಂಗವಿಠಲನೆನಿಪ ಪಶ್ಚಿಮರಂಗಗರ್ಪಿಸದವನ ಜನ್ಮ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು