ಸುಮ್ಮನೆ ವೈಷ್ಣವನೆಂಬಿರಿ
(ನಾರಾಯಣಿ ರಾಗ ಆದಿತಾಳ)
ಸುಮ್ಮನೆ ವೈಷ್ಣವನೆಂಬಿರಿ ಪರ-
ಬೊಮ್ಮ ಸುಜ್ಞಾನವನರಿಯದ ಮನುಜನ ||ಪ||
ಮುಖವ ತೊಳೆದು ನಾಮವನಿಟ್ಟೆನಲ್ಲದೆ
ಸುಖತೀರ್ಥ ಶಾಸ್ತ್ರವನೋದಿದೆನೆ
ಸುಖಕೆ ಶೃಂಗಾರಕೆ ಮಾಲೆ ಹಾಕಿದೆನಲ್ಲದೆ
ಭಕುತಿ ರಸದಲ್ಲಿ ಮುಳುಗಿದೆನೇನಯ್ಯ ||೧||
ಊರು ಮಾತುಗಳಾಡಿ ದಣಿದೆನಲ್ಲದೆ
ನಾರಾಯಣ ಕೃಷ್ಣ ಶರಣೆಂದೆನೆ
ನಾರಿಯ ನುಡಿ ಕೇಳಿ ಮರುಳಾದೆನಲ್ಲದೆ
ಗುರುಹಿರಿಯರ ಮಾತ ಮನ್ನಿಸಿದೆನೇನಯ್ಯ ||೨||
ನರೋತ್ತಮರಿಗಧಿಕ ಗಂಧರ್ವರಿಗಧಿಕ
ಸುರೇಂದ್ರಗಧಿಕ ಹರಗಧಿಕ
ವಿರಿಂಚಿಗಧಿಕ ಸಿರಿಗಧಿಕ
ಹರಿಸರ್ವೋತ್ತಮನೆಂದು ತಿಳಿದೆನೇನಯ್ಯ ||೩||
ಜಗತು ಸತ್ಯವೆಂದು ಪಂಚಭೇದವ ತಿಳಿದು
ಮಿಗೆ ರಾಗದ್ವೇಷಂಗಲನು ವರ್ಜಿಸಿ
ಭಗವಂತನ ಲೀಲೆ ಶ್ರವಣ ಕಥೆಗಳಿಂದ
ನಿಗಮಗೋಚರನೆಂದು ತಿಳಿದೆನೇನಯ್ಯ ||೪||
ಗಂಗೆಯಲಿ ಮೈಮಣ್ಣ ತೊಳೆದೆನಲ್ಲದೆ ಭವ
ಹಿಂಗುವ ಸ್ನಾನವ ಮಾಡಿದೆನೆ
ರಂಗವಿಠಲನ ನಿಜವಾದ ದಾಸರ
ಸಂಗಸುಖವೆಂದು ತಿಳಿದೆನೇನಯ್ಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments