ವಿಜಯದಾಸರ ಕವಚ

ಸ್ಮರಿಸಿ ಬದುಕಿರೋ

ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ ||

ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ೧ ||

ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ೨ ||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ೩ ||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ೪ ||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ೫ ||

ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ೬ ||

ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ೭ ||

ದಾಸ ಸಾಹಿತ್ಯ ಪ್ರಕಾರ