ಹೊಯ್ಯೋ ಹೊಯ್ಯೋ ಡಂಗುರವ.

ಹೊಯ್ಯೋ ಹೊಯ್ಯೋ ಡಂಗುರವ.

( ರಾಗ ಕಾಮವರ್ಧನಿ/ಪಂತುವರಾಳಿ. ಅಟ ತಾಳ) ಹೊಯ್ಯೋ ಡಂಗುರವ ಜಗ- ದಯ್ಯನಯ್ಯ ಶ್ರೀಹರಿಯಲ್ಲದಿಲ್ಲವೆಂದು ಅಷ್ಟೈಶ್ವರ್ಯದ ಲಕ್ಷ್ಮಿಯ ಅರಸನೆ ಸೃಷ್ಟಿ ಸ್ಥಿತಿ ಲಯಾದ್ಯಷ್ಟಕರ್ತ ಘಟ್ಟ್ಯಾಗಿದನು ತಿಳಿದು ಕೃಷ್ಣಾ ಎನದವರೆಲ್ಲ ಭ್ರಷ್ಟರಾದರು ಇಹಪರಕೆ ಬಾಹ್ಯರೆಂದು || ಹರನೆನ್ನದೆ ಹರಿ ಹರಿಯೆಂದ ಬಾಲನ ಕರುಣವಿಲ್ಲದೆ ಪಿತ ಕಾಡುತಿರೆ ತರಳನ ನುಡಿ ಕೇಳಿ ನರಮೃಗ ರೂಪದಿ ಹರಿನಿಂದಕನ ಸಂಹರಿಸಿದ ಮಹಿಮೆಯ || ಕರಿಯು ಆದಿಮೂಲ ಕಾಯೆಂದು ಮೊರೆಯಿಡೆ ಸುರ ನಿಕರವು ನೋಡೆ ಬೆರಗಾಗಿ ಭರದಿಂದಲಾಕ್ಷಣ ಗರುಡನೇರಿ ಬಂದು ಕರಿರಾಜನ ಕಾಯ್ದ ಪರದೈವ ಹರಿಯೆಂದು || ಸುರಪಗೊಲಿದು ಬಲಿ ಶಿರವ ತುಳಿಯುವಾಗ ಸುರನದಿ ಸೃಜಿಸಿದ ಹರಿಪಾದವ ಪರಮೇಷ್ಟಿ ತೊಳೆಯಲಾ ಪವಿತ್ರೋದಕವನು ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ || ಗರಳ ಜ್ವಾಲೆಗೆ ಅಂಜಿ ಸಿರಿರಾಮ ಎನ್ನುತ ಸ್ಮರಣೆ ಮಾಡಲು ಉಮೆಯರಸನಿಗೆ ಕೊರಳು ಶೀತಳವಾಗೆ ಗಿರಿಜೆಗೊಲಿದು ಆ ವರರಾಮ ಮಂತ್ರವನೊರೆದಂಥ ಮಹಿಮೆಯ || ಮಾನಸ ಪೂಜೆಗೆ ಮೆಚ್ಚಿ ಮಹಾಲಿಂಗ ಬಾಣನ ಬಾಗಿಲ ಕಾಯ್ದಿರಲು ದಾನವ ವೈರಿಯು ತೋಳ ಖಂಡಿಸುವಾಗ ಮೌನದಿಂದಲಿ ಚಂದ್ರಮೌಳಿದ್ದ ಮಹಿಮೆಯ || ಭಕ್ತಿಗೊಲಿದು ಶಿವ ಭಸ್ಮಾಸುರಗೆ ವರ- ವಿತ್ತು ಬಾಧೆಯಿಂದ ಓಡುತಿರೆ ಮತ್ತನಾದಸುರನ ಯುಕ್ತಿಯಿಂದಲಿ ಕೊಂದು ಭಕ್ತರ ಸಲಹಿದ ಶಕ್ತ ಶ್ರೀಹರಿಯೆಂದು || ಹರಬೊಮ್ಮರ್ವರದಿಂದ ಸುರನು ದಶಶಿರ ಸೆರೆಯ ಪಿಡಿದು ಸೇವೆಗೊಳುತಿರಲು ಶರಧಿಯ ದಾಟಿ ಸಂಹರಿಸಿ ರಾವಣನನ್ನು ಸುರರಿಗಭಯವಿತ್ತ ಪರದೈವ ಹರಿಯೆಂದು || ಜಗವ ಪೊರೆವನೀತ ಜಗಕಾಧಾರ ಮೂ- ಜಗವ ಧರಿಸಿ ತನ್ನ ಜಠರದಲ್ಲಿ ಮಗುವಾಗ್ಯಾಲದೆಲೆ ಮೇಲೆ ಮಲಗಿರ್ದ ಜಗಜ್ಜನಕನು ಪುರಂದರವಿಟ್ಠಲನೆಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು