ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ
( ರಾಗ ಘಂಟಾರವ ಏಕ ತಾಳ)
ಹೇಳಬಾರದೆ ಬುದ್ಧಿಯ ಕೃಷ್ಣಯ್ಯಗೆ ||ಪ||
ಗಟ್ಯಾಗಿ ಕದವನಿಕ್ಕಿ ನಾವೆಲ್ಲ
ಕೊಟ್ಟಿಗೆಯಲೊರಗಿದ್ದೆವು ನಟ್ಟ-
ನಡುವಿನಲ್ಲಿದ್ದ ಚಿಕ್ಕ ಮಕ್ಕಳೆಲ್ಲ
ಕಟ್ಟಕಡೆಯಲಿಟ್ಟನೆ ಗೋಪ್ಯಮ್ಮ ||
ಹಾಲುಗಳ್ಳನೆಂದು ನಿನ್ನ ಮಗನ
ಹಾದಿಗ್ಹೋಗದಿದ್ದೇವೆ
ಹಾಲುಸುಂಕವ ಬೇಡಿ ತೋಳಡ್ಡಗಟ್ಟಿದ
ಬಾಳ ಹಾವಳಿಗಾರಮ್ಮ ಗೋಪ್ಯಮ್ಮ ||
ಮೊಸರುಗಳ್ಳನೆಂದು ನಿನ್ನ ಮಗನ
ಪೆಸರುಗೊಳ್ಳೆವೆ ತಾಯೆ
ಹೊಸ ಹೆಂಗಳರನಪಹಾಸ್ಯವ ಮಾಡುವ
ಹಸುಮಗನಿವನೇನಮ್ಮ ಗೋಪ್ಯಮ್ಮ ||
ಸರಸರನೆ ಬಂದು ನಿನ್ನ ಮಗನು
ಹೊರಸು ಏರಿ ಕುಳಿತು
ಪುರುಷರಿಲ್ಲದ ವೇಳ್ಯ ಹವಣಿಸಿ ತಾ ಹೊಂದಿ
ಸರಸವಾಡಿದನಮ್ಮ ಗೋಪ್ಯಮ್ಮ ||
ಬಟ್ಟ ಕುಚದ ಮೇಲೆ ಬೆಟ್ಟನೂರಿ
ಮುಟ್ಟಿ ಮುಟ್ಟಿ ನೋಡುತ
ಗಟ್ಯಾಗಿ ನಾ ಬೇಗ ಹಿಡಿಯಬೇಕೆಂದರೆ
ತಟ್ಟನೆ ಮಾಯವಾದನಮ್ಮ ಗೋಪ್ಯಮ್ಮ ||
ಚಿಕ್ಕ ಮಕ್ಕಳನೆಲ್ಲ ಹಿಡಿತಂದು
ಜುಟ್ಟಿಗೆ ಕಲ್ಲು ಕಟ್ಟಿ
ನಕ್ಕು ನಲಿವಾಗ ಹಿಡಿಯಬೇಕೆಂದರೆ
ತಕ್ಕೈಸಿಕೊಂಡನಮ್ಮ ಗೋಪ್ಯಮ್ಮ||
ಅಟ್ಟುಳಿ ಘನವಾಗೆ ಈ ಗೋಕುಲ
ಬಿಟ್ಟು ಹೋದೇವೆ ತಾಯಿ
ಗಟ್ಯಾಗಿ ಈ ಬುದ್ಧಿಯ ಮಾಡದಂತೆ ಈ
ಕೃಷ್ಣನ ದಂಡಿಸಮ್ಮ ಗೋಪ್ಯಮ್ಮ ||
ಆಳಿಗೊಂದೊಂದು ಮಾತ ಹೇಳಿ ನೀವು
ಆಡಿಕೊಂಬಿರೆ ಕೃಷ್ಣನನ
ಆಳುವ ನಿಮ್ಮ ಗಂಡರಿಗೆ ನಾಚಿಕೆಯಿಲ್ಲ
ಗೂಳಿಬಿಟ್ಟಿದೆ ನಿಮ್ಮನು ಸ್ತ್ರೀಯರನು ||
ಪುಣ್ಯವಂತರೆ ನೀವು ಕೃಷ್ಣನ ನಿತ್ಯ
ಕಣ್ಣಿಲಿ ಕಾಣುವಿರಿ
ಸಣ್ಣವನೆಂದು ಶ್ರೀ ಪುರಂದರವಿಠಲಗೆ
ಅನ್ಯಾಯ ನುಡಿಯದಿರೆ ನಾರಿಯರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments