ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ
( ರಾಗ ಶಂಕರಾಭರಣ. ತ್ರಿಪುಟ ತಾಳ)
ಹೇಗೆ ಮೆಚ್ಚಿಸಲಿ ಅರ್ಚಿಸಲಿ ನಿನ್ನ
ನಾಗಶಯನನ ನಾರದ ವಂದನೆ ದೇವ ||ಪ||
ಮಂಗಳಾಭಿಷೇಕಕೆ ಉದಕ ತರುವೆನೆನೆ
ಗಂಗೆಯಂಗುಷ್ಠದಿ ಪಡೆದಿರುವೆ
ಸಂಗೀತ ಕೀರ್ತನೆ ಪಾಡುವೆನೆಂದರೆ
ತುಂಬುರು ನಾರದರು ಪಾಡುತಿಹರೋ ದೇವ ||
ಪುಷ್ಪವ ತಂದು ನಿನಗರ್ಪಿಸುವೆನೆಂದರೆ
ಪುಷ್ಪ ಪಲ್ಲವಿಸಿದೆ ಹೊಕ್ಕುಳಲಿ
ಇಪ್ಪ ತೆತ್ತಿಸಕೋಟಿ ದೇವರ್ಕಳದ-
ನೊಪ್ಪಿ ನೈವೇದ್ಯ ನೀಡಲು ತೃಪ್ತನಾಗುವೆ ||
ಕೋಟಿಸೂರ್ಯರ ಪ್ರಭೆ ಮಿಗಿಲಾದಾತನಿಗೊಂದು
ದೀಪವನು ಹಚ್ಚಿದರೆ ಬೆಳಕಹುದೆ
ಸಾಟಿಗಾಣದೆ ಲಕ್ಷ್ಮಿ ಉರಸ್ಥಳವಾಗಿರೆ
ಲೋಷ್ಟ ಕಾಸು ಎಂದು ಕಾಣಿಕೆ ನೀಡೆಲೊ ||
ಹಾಸಿಗೆಯನು ತಂದು ಹಾಸುವೆನೆಂದರೆ
ಶೇಷನ ಮೇಲೆ ನೀ ಪವಡಿಸಿರ್ಪೆ
ಬೀಸಣಿಗೆಯ ತಂದು ಬೀಸುವೆನೆಂದರೆ
ಬೀಸುತಿಹನು ಖಗ ತನ್ನ ಪಕ್ಕದಲಿ ||
ನಿತ್ಯ ಗುಣಾರ್ಣವ ನಿಜಗುಣ ಪರಿಪೂರ್ಣ
ಸಚ್ಚಿದಾನಂದ ಸನಕಾದಿವಂದ್ಯ
ಮುಕ್ತಿದಾಯಕ ನಮ್ಮ ಪುರಂದರವಿಠಲ
ಭಕ್ತಿದಾಯಕನೆಂದು ಸ್ತುತಿಸಿ ಕೊಂಡಾಡುವೆನೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments