Skip to main content

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ

(ರಾಗ ಪಂತುವರಾಳಿ ಅಟತಾಳ)

ಹಿಂದಿಲ್ಲಾ ಸ್ವಾಮಿ ಮುಂದಿಲ್ಲಾ , ಗೋ-
ವಿಂದ ನೀನಲ್ಲದೆ ಇಹಪರವಿಲ್ಲ ||

ಪರರ ಬೇಡಿಪ್ಪಂತೆ ಗತಿಯಾಯಿತಲ್ಲ
ನರರ ತುತಿಸಿ ನಾಲಿಗೆ ಬರಡಾಯಿತಲ್ಲ
ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲ
ನರಗೆ ಪಾಮರಗೆ ಪಾಪದ ಪಂಜರಗೆ ||

ತನುವು ತನ್ನದಲ್ಲ ತನ್ನವರು ತನಗಿಲ್ಲ
ಅನುಕೂಲವಿರುವಾಗ ಸತಿಸುತರೆಲ್ಲ
ಅನುವು ತಪ್ಪಿ ಮನವು ತಲ್ಲಣಿಸುತಿರುವಾಗ
ವನಜನಾಭ ನೀನಲ್ಲದೆ ಯಾರಿಲ್ಲ ||

ಮಾತಾಪಿತೃ ಬಂಧುಗಳು ಮುಂತಾಗಿ ಸಂ-
ಪ್ರೀತಿಯೊಳಿರಲು ಮನ್ನಿಪರೈ ಎಲ್ಲ
ಕಾತರನಾಗ್ಯಮ ಕೊಂಡೊಯ್ಯುತಿರುವಾಗ ಸಂ-
ಗಾತ ಇನ್ನ್ಯಾರಯ್ಯ ಪುರಂದರವಿಠಲ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: