ಹರಿವಾಸರದುಪವಾಸದ ಭಾಗ್ಯವು
( ರಾಗ ಕೇದಾರಗೌಳ )
ಹರಿವಾಸರದುಪವಾಸದ ಭಾಗ್ಯವು ಕಂಡ ಕಂಡವರಿಗೆ ದೊರಕುವುದೆ ||ಪ||
ಹಿರಿದು ಜನ್ಮಗಳಿಂದ ಹರಿಯನಾರಾಧಿಪ ಪರಮ ಭಾಗವತಭಕ್ತರಿಗಲ್ಲದೆ ||ಅ||
ಸ್ನಾನ ಸಂಧ್ಯಾನ ಮೊದಲಾದ ಕರ್ಮನ್ಯೂನದ ಪಾಪರಾಶಿ
ಹೇನು ಇರುವೆ ನೊಣ ಮೊದಲಾದ ಪ್ರಾಣಿಯ ಹಿಂಸೆಯ ಪಾಪಂಗಳು
ಹೀನತ್ವದಿಂದ ತುಚ್ಛರ ಕೈಲಿ ಹಿಡಿದ ದುರ್ದಾನದ ಪಾಪಂಗಳು
ಭಾನುಬಿಂಬವ ಕಂಡ ಹಿಮದಂತೆ ತೊಲಗುವ ಆನಂದವ್ರತಕೆ ಸರಿಯೆನ್ನಬಹುದೆ ||
ಪರಸತಿಯರ ನೋಡಿ ಮನವಿಟ್ಟ ಪಾಪವು ಪರದೂಷಣೆ ಪಾಪವು
ಪರಹಿಂಸೆಯ ಮಾಡಿ ಅವರ ವಸ್ತುಗಳನ್ನು ಅಪಹರಿಸಿದ ಪಾಪವು
ಪರಮಾತ್ಮನ ಪೊಗಳುವ ನಾಲಿಗೆಯಲ್ಲಿ ನರರ ಪೊಗಳುವ ಪಾಪವು
ಹರಿಯ ಮರಿಯ ಕಂಡ ಕರಿಯ ಸಂಘಗಳಂತೆ ದುರಿತ ಕೋಟಿಗಳನ್ನು ಪರಿಹರಿಸುವಂಥ ||
ಆಡುವ ಅನೃತ ವಾಕ್ಯಗಳಿಂದ ಸಂಭವವಾಗುವ ಪಾಪಂಗಳು
ಆಡಬಾರದ ದಿನಗಳಲಿ ಸ್ತ್ರೀಗೋಷ್ಠಿಯನಾಡಿದ ಪಾಪಂಗಳು
ಬೇಡಬಾರದಂಥ ವರವ ಕೊಡು ಎಂದು ಬೇಡಿದ ಪಾಪಂಗಳು
ಕಾಡುಗಿಚ್ಚನು ಕಂಡ ಖಗಮೃಗತತಿಯಂತೆ ಓಡಿಸುತಿರುವಂಥ ಉತ್ತಮ ವ್ರತವು ||
ತೋರುವ ದಶಮಿದ್ವಾದಶಿಯೆಂಬ ಸಂಪುಟಾಕಾರದಿಂದೊಪ್ಪುವ ಹರಿದಿನವು
ಮೂರು ದಿನದ ವ್ರತ ನಾಲ್ಕು ಹೊತ್ತಿನ ಆಹಾರವು ವರ್ಜಿತವು
ಊರು ದಾರಿಗಳನ್ನು ನಡೆಯಬಾರದು ತಾಂಬೂಲವು ವರ್ಜಿತವು
ನಾರಾಯಣ ದಾಸರ ಸಂಘದೊಡನೆ ಜಾಗರ ಮಾಡಿ ಶ್ರೀ ಹರಿಯ ಕೊಂಡಾಡುವ ||
ಅತಿಶಯ ದಿನದಲ್ಲಿ ದೇವ ಋಷಿ ತರ್ಪಣ ವರ್ಜಿತವು
ಪ್ರತಿ ವರುಷದಲಿ ಆಚರಿಸುವ ತಾಯ್ತಂದೆ ತಿಥಿಗಳೆಲ್ಲವು ವರ್ಜ್ಯವು
ಸತತವು ಮಾಡುವ ಯಜ್ಞಪುರುಷನಿಗಾಹುತಿಗಳೆಲ್ಲವು ವರ್ಜ್ಯವು
ಇತರವಾದ ಭೋಗದಾಸೆಗಳೆಲ್ಲವ ವರ್ಜಿಸುತಲಿ ವೀರವ್ರತವನಾಚರಿಸುವ ||
ಒತ್ತಿ ಬರುವ ಪಾಪಂಗಳಿಗೆಲ್ಲ ಇಂತಿದು ಪಕ್ಷ ಪ್ರಾಯಶ್ಚಿತ್ತವು
ಉತ್ತಮವಾದ ಹಲವು ವ್ರತಗಳಿಗಿಂತ ಉತ್ತಮವಾಗಿಹುದು
ಚಿತ್ತ ಶುದ್ಧಿಯನಿತ್ತು ಜ್ಞಾನ ವೈರಾಗ್ಯಾದಿ ಮುಕ್ತಿ ಸಾಧನವೀವುದು
ಮುಕ್ತಿಗೆ ಸೋಪಾನ ತರಣಿ ಭವಾಬ್ಧಿಗೆ ಹರಿಯ ಸನ್ನಿಧಿಗೆ ಹೆದ್ದಾರಿಯ ತೋರುವ ||
ಹಲವು ಪುರಾಣಗಳೋದಿ ಶಾಸ್ತ್ರಂಗಳ ತಿಳಿದು ಕೇಳಿದರೇನು
ಹಲವು ಪುಣ್ಯತೀರ್ಥ ನದ ನದಿಗಳೆಲ್ಲಿ ಸ್ನಾನ ಮಾಡಿದರೇನು
ಹಲವು ವ್ರತಂಗಳಾಚರಿಸಿ ದಾನಂಗಳ ತಿಳಿದು ಮಾಡಿದರೇನು
ಹಲವು ದೈವಗಳೊಡೆಯ ಪುರಂದರವಿಠಲನ ಒಲುಮೆಯ ವ್ರತಕೆ ಸರಿಯೆನಬಹುದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments