ಹರಿಯ ನೆನೆಯದ ನರಜನ್ಮವೇಕೆ

ಹರಿಯ ನೆನೆಯದ ನರಜನ್ಮವೇಕೆ

(ರಾಗ ಪೂರ್ವಿ. ಅಟ ತಾಳ ) ಹರಿಯ ನೆನೆಯದ ನರಜನ್ಮವೇಕೆ, ನರ- ಹರಿಯ ಕೊಂಡಾಡದ ನಾಲಿಗೆಯೇಕೆ ವೇದವನೋದದ ವಿಪ್ರ ತಾನೇಕೆ ಕಾದಲರಿಯದ ಕ್ಷತ್ರಿಯನೇಕೆ ಕ್ರೋಧವ ಬಿಡದ ಸನ್ಯಾಸಿ ತಾನೇಕೆ ಆದರವಿಲ್ಲದ ಅಮೃತಾನ್ನವೇಕೆ ಸತ್ಯ ಶೌಚವಿಲ್ಲದಾಚಾರವೇಕೆ ನಿತ್ಯ ನೇಮವಿಲ್ಲದ ಜಪ ತಪವೇಕೆ ಭಕ್ತಿಲಿ ಮಾಡದ ಹರಿ ಪೂಜೆಯೇಕೆ ಉತ್ತಮರಿಲ್ಲದ ಸಭೆಯು ತಾನೇಕೆ ಮಾತಾಪಿತರ ಪೊರೆಯದ ಮಕ್ಕಳೇಕೆ ಮಾತು ಕೇಳದ ಸೊಸೆ ಗೊಡವೆ ತಾನೇಕೆ ನೀತಿನೇರಿಲ್ಲದ ಕೂಡ ತಾನೇಕೆ ಅ- ನಾಥನಾದ ಮೇಲೆ ಕೋಪವದೇಕೆ ಅಳಿದು ಅಳಿದು ಹೋಗುವ ಮಕ್ಕಳೇಕೆ ತಿಳಿದು ಬುದ್ಧಿಯ ಹೇಳದ ಗುರುವೇಕೇ ನಳಿನನಾಭ ಶ್ರೀ ಪುರಂದರವಿಠಲನ ಚೆಲುವ ಮೂರುತಿಯ ನೋಡದ ಕಂಗಳೇಕೆ
ದಾಸ ಸಾಹಿತ್ಯ ಪ್ರಕಾರ
ಬರೆದವರು