ಹರಿಕಥಾಮೃತಸೇವೆ ಹರಿದಾಸರಲ್ಲದಲೆ

ಹರಿಕಥಾಮೃತಸೇವೆ ಹರಿದಾಸರಲ್ಲದಲೆ

( ರಾಗ ಮೋಹನ. ಅಟ ತಾಳ) ಹರಿ ಕಥಾಮೃತ ಸೇವೆ ಹರಿದಾಸರಲ್ಲದಲೆ ದುರುಳ ಮೂಢರು ಬಲ್ಲರೆ ||ಪ|| ಸ್ತನ್ಯಪಾನದ ಸವಿಯ ಚಿಣ್ಣರರಿಯುವಂತೆ ಮಣ್ಣು ಬೊಂಬೆಯು ಬಲ್ಲುದೆ ಅನ್ನಪಾನದ ಸವಿಯ ಕೊನೆನಾಲಿಗರಿವಂತೆ ಅಣಿ ಮಾಡಿ ಕೊಡುವಂಥ ಕರ ಬಲ್ಲುದೆ || ನವನೀರದಾರ್ಭಟಕೆ ನವಿಲುಗಳು ನಲಿವಂತೆ ಕಾವುಕಾವೆಂಬ ಕಾಕವು ನಲಿವುವೆ ದಿವಸಾಧಿಪತಿಯುದಿಸಲರಳುವಬ್ಜಗಳಂತೆ ದಿವಸಾಂಧ ಪಕ್ಷಿಗಳು ಹರುಷಿಸುವುವೆ || ಮುಲ್ಲೆ ಮಲ್ಲಿಗೆ ಮುಡಿಯಬಲ್ಲ ಮಾನವರಂತೆ ಭಲ್ಲೂಕಗಳು ಅದರ ಬಗೆ ಬಲ್ಲವೆ ಫುಲ್ಲಾಕ್ಷ ರಘುಪತಿ ಪುರಂದರವಿಟ್ಠಲನ ಬಲ್ಲ ಸಜ್ಜನರಂತೆ ಖುಲ್ಲರರಿಯುವರೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು