Skip to main content

ಸುಲಭಪೂಜೆಯ ಮಾಡಿ

( ರಾಗ ಕಾಂಭೋಜ ಝಂಪೆತಾಳ)

ಸುಲಭಪೂಜೆಯ ಮಾಡಿ ಬಲವಿಲ್ಲದವರು ||ಪ||
ನಳಿನನಾಭನಪಾದನಳಿನಸೇವಕರು ||ಅ||

ಇರುಳು ಹಚ್ಚುವ ದೀಪ ಹರಿಗೆ ನೀರಾಜನವು
ಮರೆ ಮಾಡುವ ವಸ್ತ್ರ ಪರಮ ಮಡಿಯು
ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯು
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು ||

ನುಡಿದ ಮಾತುಗಳೆಲ್ಲ ಕಡಲಶಯನನ ಜಪವು
ಮಡದಿ ಮಕ್ಕಳು ಮತ್ತೆ ಒಡನೆ ಪರಿವಾರ
ನಡುಮನೆಯ ಅಂಗಳವು ಉಡುಪಿವೈಕುಂಠಗಳು
ಎಡಬಲದ ಮನೆಯವರು ಕಡು ಭಾಗವತರು ||

ಹೀಗೆ ಅನುದಿನ ತಿಳಿದು ಹಿಗ್ಗುವ ಜನರ ಭವ-
ರೋಗ ಪರಿಹರವು ಮೂಜಗದಿ ಸುಖವು
ಹೋಗುತಿದೆ ಈ ಆಯು ಬೇಗದಿಂದಲಿ ನಮ್ಮ
ಯೋಗೀಶ ಪುರಂದರವಿಠಲನ ನೆನೆನೆನೆದು ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: