ಸಾರಿದ ಡಂಗುರ ಯಮನು

ಸಾರಿದ ಡಂಗುರ ಯಮನು

----ರಾಗ - ನಾದನಾಮಕ್ರಿಯೆ (ಸಾರಂಗ) ಅಟತಾಳ (ದೀಪಚಂದಿ) ಸಾರಿದ ಡಂಗುರ ಯಮನು-ಅಘ- ನಾರಿಯರೆಳೆದು ತಂದು ನರಕದೊಳಿಡು ಎಂದು ||ಅ.ಪ|| ಹೊತ್ತಾರೆ ಎದ್ದು ಪತಿಗೆ ಎರಗದವಳ ಮೃತ್ತಿಕೆ ಶೌಚ ಮಾಡದೆ ಇಪ್ಪಳ ಹೊತ್ತಾಗೆ ಮೈತೊಳೆದತ್ತಿಗೆ ನಾದಿನಿ ಅತ್ತೆ ಮಾವರ ಬೈವಳೆತ್ತಿ ತನ್ನಿರೊ ಎಂದು ||೧|| ತಿಲಕಾಯುಧವ ಬಿಟ್ಟು ಕುಂಕುಮವಿಡುವಳ ಬೆಳಗಾದ ಕಾಲಕ್ಕು ಮಲಗಿಪ್ಪಳ ಮಲಿನ ವಸ್ತ್ರವನುಟ್ಟು ಪತಿಬಳಿ ಪೋಪಳ ಕಲಹಕಾರಿಯ ಪಿಡಿದೆಳೆತನ್ನಿರೊ ಎಂದು ||೨|| ಉತ್ತಮ ಗುರುಹಿರಿಯರನು ನಿಂದಿಸುವಳ ಹೆತ್ತ ಮಕ್ಕಳ ಮಾರಿ ಬದುಕುವಳ ಪ್ರತ್ಯೇಕ ಶಯ್ಯದಿ ಮಲಗಿಪ್ಪಳ ನೀಚ- ವೃತ್ತಿಯಳ ಪಿಡಿದೆತ್ತಿ ತನ್ನಿರೊ ಎಂದು ||೩|| ಜಲಜಕ್ಕಿಸಾಳಿ ಕಂಬಳಿ ಲೋಳೀ ಬಕ್ಕಿ ಗೊಂ- ದಲ ಮೊದಲಾದುವು ದೈವವೆಂದು ತಿಳಿದು ಪಿಶಾಚಿ ಎಂಜಲನುಂಡು ಹಿಗ್ಗುವ ಲಲನೇರನಾಲಸ್ಯಗೊಳ್ಳದೆ ತನ್ನಿರೊ ಎಂದು ||೪|| ಒಲುಮೆ ಔಷಧ ಮಾಡಿ ಪತಿಯನೊಲಿಸುವಳ ಮಲಮಕ್ಕಳೊಳು ಮತ್ಸರಿಸುತಿಪ್ಪಳ ಕಳುವಿಲಿ ಕಾಂತನ ಧನವ ವಂಚಿಸುವಳ ಗಳಕೆ ಪಾಶವ ಸುತ್ತಿ ಎಳೆದು ತನ್ನಿರೊ ಎಂದು ||೫|| ನಾಗೇಂದ್ರಶಯನನ ದಿನದಲಿ ಉಪವಾಸ ಜಾಗರ ಮಾಡದೆ ಮಲಗಿಪ್ಪಳ ಭಾಗವತಾದಿ ಶಾಸ್ತ್ರವ ಕೇಳದೆ ಮತ್ತ- ಳಾಗಿ ತಿರುಗುವಳ ಎಳೆದು ತನ್ನಿರೊ ಎಂದು ||೬|| ಉಡಲಿಲ್ಲ ಉಣಲಿಲ್ಲ ಇಡಲಿಲ್ಲ ತೊಡಲಿಲ್ಲ ಸುಡಲಿ ಗಂಡನ ಒಗತನವೆನ್ನುತ ಪಡೆದವರನು ನುಡಿನುಡಿಗೆ ಬೈಯುವ ಇಂಥ ಕಡುಪಾಪಿಗಳ ಹೆಡೆಮುಡಿ ಕಟ್ಟಿ ತಾ ಎಂದು ||೭|| ಗಂಡ ನಿರ್ಧನಿಕನೆಂದವಮಾನ ಮಾಳ್ಪಳ ಉಂಡ ಶೇಷಾನ್ನವನುಣಿಸುವಳ ಕೊಂಡೆ ಮಾತುಗಳ್ಹೇಳಿ ಕಳವಳಗೊಳಿಪಳ ಮಂಡೆ ಕೂದಲು ಹಿಡಿದೆಳೆದು ತನ್ನಿರೊ ಎಂದು ||೮|| ಸಾಲೆಡೆಯಲಿ ಭೇದ ಮಾಡಿ ಬಡಿಸುವಳ ನೀಲಾಂಬರವನುಟ್ಟು ಮಡಿಯೆಂಬಳ ಬಾಲಕರನು ಬಡಿದಳಿಸುತಿಪ್ಪಳ ಹಿಂ- ಗಾಲ ತೊಳೆಯದವಳ ಎಳೆದು ತನ್ನಿರೊ ಎಂದು ||೯|| ಮೀಸಲು ಮಡಿ ಎನ್ನದೆ ಭುಂಜಿಸುವಳ ಸ- ಕೇಶಿಯೊಡನೆ ಗೆಳೆತನ ಮಾಳ್ಪಳ ದಾಸೇರಿಂದಲಿ ಪಾಕಪಾತ್ರೆ ಮುಟ್ಟಿಸುವಳ ಪಾತಗಳನೆ ಹಾಕಿ ಎಳೆದು ತನ್ನಿರೊ ಎಂದು ||೧೦|| ಪತಿಗೆ ಬೇಕಾದವರೊಳು ಮತ್ಸರಿಸುವಳ ಮೃತವತ್ಸಗೋವಿನ ಪಾಲುಂಬಳ ಹುತವಹನನು ಪಾದತಳದಿ ನೊಂದಿಸುವಳ ಮತಿಗೇಡಿಯ ಹಿಡಿದೆಳೆದು ತನ್ನಿರೊ ಎಂದು ||೧೧|| ಅತ್ತೆಮಾವರ ಕೂಡೆ ಮತ್ಸರಿಸುವಳ ಸತ್ತವರ ನೆನೆನೆನೆದಳುತಿಪ್ಪಳ ದತ್ತಾಪಹಾರವ ಮಾಡುತಿಪ್ಪಳ ಉ- ನ್ಮತ್ತಳ ಹಿಡಿದೆಳೆದೆತ್ತಿ ತನ್ನಿರೋ ಎಂದು ||೧೨|| ಲಶುನ ವೃಂತಾಕಾದಿಗಳನು ಭಕ್ಷಿಸುವಳ ಸೊಸೆಯರೊಡನೆ ಮತ್ಸರಿಸುತಿಹಳ ಹಸಿದು ಬಂದವರಿಗೆ ಅಶನವಿಲ್ಲೆಂಬಳ ಉಸಿರು ಬಿಡದ ಹಗೆ ಎಳೆದು ತನ್ನಿರೊ ಎಂದು ||೧೩|| ತುಲಸಿವೃಂದಾವನಕಭಿನಮಿಸದವಳ ಜಲವ ಶೋಧಿಸದೆ ಪಾನವ ಮಾಳ್ಪಳ ಫಲಧಾನ್ಯಾದಿಗಳ ನೋಡದೆ ಪಾಕ ಮಾಳ್ಪಳ ಮಳೆಗಾಳಿ ನಿಂದಿಪಳೆಳೆದು ತನ್ನಿರೊ ಎಂದು ||೧೪|| ಅರಸಿನ ಕುಂಕುಮ ಪುಷ್ಪಾಂಜನ ವಸ್ತ್ರಾ- ಭರಣಭೂಷಿತಳಾಗಿ ಪತಿಯೊಡನೆ ಸರಸವಾಡುವ ಸುಖ ಹರಿಗೆ ಅರ್ಪಿತವೆಂದು ಗರತೇರೆಡೆಗೆ ಕರಮುಗಿದು ಬನ್ನಿರೊ ಎಂದು ||೧೫|| ಬಾಲಕರನ್ನು ತೊಟ್ಟಿಲೊಳಗಿಟ್ಟು ತೂಗುತ ಪಾಲೆರೆವುತ ಹಾಡಿ ಪಾಡುತಲಿ ಆಲಯದೊಳು ಕೆಲಸಗಳ ಮಾಡುತ ಲಕ್ಷ್ಮೀ- ಲೋಲನ ಸ್ಮರಿಸುವವರನು ಮುಟ್ಟದಿರೆಂದು ||೧೬|| ಅಗಣಿತಮಹಿಮ ಶ್ರೀಜಗನ್ನಾಥವಿಠಲನ ಹಗಲು-ಇರುಳು ಬಗೆಬಗೆಯಿಂದಲಿ ಹೊಗಳುವ ದಾಸರ ಬಗೆಯವರೆನಿಸುವ ಸುಗುಣೇರಿದ್ದೆಡೆಗೆ ಕೈಮುಗಿದು ಬನ್ನಿರೊ ಎಂದು ||೧೭||
ದಾಸ ಸಾಹಿತ್ಯ ಪ್ರಕಾರ
ಬರೆದವರು