ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ
( ರಾಗ ಬೇಗಡೆ ಛಾಪು ತಾಳ)
ಸಹಿಸಲಾರೆನೆ ಗೋಪಿ ನಿನ್ನ ಮಗನ ಲೂಟಿ,
ಏನೆಂದು ಪೇಳಮ್ಮ ||ಪ ||
ವಾಸುದೇವನು ಬಂದು ಮೋಸದಿಂದಲಿ ಎನ್ನ
ವಾಸವ ಸೆಳಕೊಂಡು ಓಡಿ ಪೋದನಮ್ಮ ||ಅ ||
ದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ
ಸಾವಿರ ನುಂಗುವನೆ
ಭಾವಜನಯ್ಯ ಇದೇನೆಂದರೆ ನಿಮ್ಮ
ಕಾವ ದೇವರು ನಾ ಕೇಳಿಕೋ ಎಂಬನೆ ||
ಅಗ್ರೋದಕ ತಂದು ಜಗಲಿ ಮೇಲಿಟ್ಟರೆ
ವೆಗ್ಗಳದಲಿ ಕುಡಿವ
ಮಂಗಳಮಹಿಮನ ಮೀಸಲೆಂದರೆ ನಿಮ್ಮ
ಮಂಗಳಮಹಿಮನ ಅಪ್ಪ ನಾನೆಂಬನೆ ||
ಅಟ್ಟಡುಗೆಯನೆಲ್ಲ ಉಚ್ಚಿಷ್ಟ ಮಾಡಿ
ಅಷ್ಟು ತಾ ಬಳಿದುಂಬನೆ
ಕೃಷ್ಣದೇವರ ನೈವೇದ್ಯವೆಂದರೆ ನಿಮ್ಮ
ಇಷ್ಟ ದೇವರು ತೃಪ್ತನಾದನೆಂತೆಂಬನೆ ||
ಋತುವಾದ ಬಾಲೆಯರು ಪತಿಯೊಡೆಗೆ ಪೋಪಾಗ
ಪಥದೊಳಗಡಗಿರುವ
ಮತಿಗೆಟ್ಟ ಹೆಣ್ಣೆ ಸುಂಕವ ಕೊಡು ಎನುತಲಿ
ರತಿಯಿಂದ ಮಾನವ ಸೂರೆಗೊಂಬುವನೆ ||
ಅಚ್ಚ ಪಾಲ್ಮೊಸರು ನವನೀತವು ಮಜ್ಜಿಗೆ
ರಚ್ಚೆ ಮಾಡಿ ಕುಡಿವ
ಸ್ವಚ್ಛ ಶ್ರೀಪುರಂದರವಿಟ್ಠಲರಾಯನ
ಇಚ್ಛೆಯಿಂದಲಿ ನಿನ್ನ ಮನೆಗೆ ಕರೆದು ಕೊಳ್ಳೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments