ಸರ್ವಾಂತರ್ಯಾಮಿ ಸಲಹೊ
--ರಾಗ ಕಾಂಬೋಧಿ (ಭೂಪ) ತಾಳ-ಝಂಪೆ
ಸರ್ವಾಂತರ್ಯಾಮಿ ಸಲಹೊ ಎನ್ನ ||ಪ||
ದುರ್ವಾರ್ತೆ ಕೇಳಿ ಮನ ಬಿಡದೆ ಚಿಂತಿಸುತಿದೆ||ಅ.ಪ||
ಜೀವರಿಗೆ ಗುಣಕಾಲಕರ್ಮಪ್ರಕೃತಿಗಳ ಸ್ವ-
ಭಾವಗಳನನುಸರಿಸಿ ಸುಖ-ದುಃಖವ
ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ-
ತ್ತಾವನೈ ಭಕ್ತರನು ಪಾಲಿಸುವ ದಾತ ||೧||
ಸತ್ಯಸಂಕಲ್ಪ ನೀನೆಂಬುದೆಂದಿಗು ಸತ್ಯ
ಭೃತ್ಯವತ್ಸಲನೆಂಬೊ ಬಿರುದಿಲ್ಲವೆ
ದತ್ತಾತ್ರೇಯ ನಿನ್ನ ಸ್ಮರಣೆ ಮಾತ್ರದಿ ಅಪ-
ಮೃತ್ಯು ಪರಿಹರವಹುದು ಸಂದೇಹವಿಲ್ಲಿದಕೆ ||೨||
ಶ್ರೀಪತೇ ಎನ್ನ ವಿಜ್ಞಾಪನೆಯ ಕೈಕೊಂಡು
ಪಾಪಿ ಜನರಿಂದ ಬಂದಾಪತ್ತನು
ನೀ ಪರಿಹರಿಸಯ್ಯ ದ್ರೌಪದೀವರದ ಕರು-
ಣಾಪಯೋನಿಧಿ ಜಗನ್ನಾಥವಿಠ್ಠಲಸ್ವಾಮಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments