ಸಂದಿತಯ್ಯ ಪ್ರಾಯವು

ಸಂದಿತಯ್ಯ ಪ್ರಾಯವು

( ರಾಗ ಕಲ್ಯಾಣಿ ಅಟ ತಾಳ) ಸಂದಿತಯ್ಯ ಪ್ರಾಯವು ಸಂದಿತಯ್ಯ ||ಪ || ಒಂದು ದಿನವು ಸುಖವು ಇಲ್ಲ ಕುಂದಿ ಹೋದೆ ಕಷ್ಟದಿಂದ ಬಂಧನವನು ಬಿಡಿಸುತೆನ್ನ ತಂದೆ ನೀನೆ ರಕ್ಷಿಸಯ್ಯ ||ಅ || ತಂದೆ ಉದರದಿ ಮೂರು ತಿಂಗಳು ಸಂದು ಹೋಯಿತು ತಿಳಿಯದೆ ಬೆಂದೆ ನವಮಾಸದೊಳು ಗರ್ಭದಿ ನಿಂದು ತಾಯಿಯ ಗರ್ಭದೆ | ಕುಂದಿತಾಯುವು ಒಂದು ವರುಷ ಇಂದಿರೇಶನೆ ಕೇಳು ದುಃಖವ ಬಂಧನದೊಳಗೆ ನಿಂದೆನನುದಿನ ಮುಂದೆ ಮೋಕ್ಷದ ಮಾರ್ಗ ಕಾಣದೆ || ಕತ್ತಲೆಯೊಳಿರಲಾರೆನುತಲಿ ಹೊತ್ತೆ ಹರಕೆಯ ನಿನ್ನೊಳು ನಿತ್ಯದಲಿ ಮಲಮೂತ್ರ ಬಾಲ್ಯದಿ ಹೊತ್ತುಗಳೆದೆನು ಎನ್ನೊಳು | ಮತ್ತೆ ಹದಿನಾರರ ಪ್ರಾಯದಿ ಉಕ್ಕಿ ನಡೆದೆನು ಧರೆಯೊಳು ಹತ್ತಿ ಸಂಸಾರದ ಮಾಯಾ ಸಿಕ್ಕಿದೆನು ಭವಬಲೆಯೊಳು || ಎಡೆಬಿಡದೆ ಅನುದಿನದಿ ಪಾಪದ ಕಡಲೊಳಗೆ ನಾ ಬಿದ್ದೆನೊ ದಡವ ಕಾಣದೆ ದುಃಖದೊಳು ಬೆಂ- ದೊಡಲೊಳಗೆ ನಾ ನೊಂದೆನೋ | ಬಿಡದೆ ನಿನ್ನಯ ಧ್ಯಾನವೆಂದೆಂ- ಬ್ಹಡಗವೇರಿಸು ಎಂದೆನೋ ದೃಢದಿ ನಿನ್ನಯ ಪಾದ ಸೇರಿಸೊ ಒಡೆಯ ಪುರಂದರವಿಟ್ಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು