ಶರಣು ಶರಣು ಸುರೇಂದ್ರವಂದಿತ

ಶರಣು ಶರಣು ಸುರೇಂದ್ರವಂದಿತ

( ರಾಗ ಸೌರಾಷ್ಟ್ರ. ಅಟ ತಾಳ) ಶರಣು ಶರಣು ಸುರೇಂದ್ರವಂದಿತ ಶಂಖಚಕ್ರಗದಾಧರ ||ಪ|| ಶರಣು ಸರ್ವೇಶ್ವರನೆ ಅಹೋಬಲ ಗಿರಿಯ ನರಸಿಂಹಮೂರ್ತಿಗೆ || ಮೋರೆ ಕೆಂಜಡೆ ಕಣ್ಣು ಕಿವಿ ಎದೆ ಬಾಯಿ ಮೂಗಿನ ಶ್ವಾಸದಿ ಮೇರುವಿಗೆ ಮಿಗಿಲಾಗಿ ಮೊರೆವನ ಧೋರಕಿಡಿಗಳ ಸೂಸುತ ಸಾರಿ ಸಾರಿಗೆ ಹೃದಯರಕುತವ ಘೀರುಘೀರನೆ ಹೀರುತ ಧೀರತನದಿ ಉಪೇಂದ್ರ ಮೆರೆದ ವೀರನರಸಿಂಹಮೂರ್ತಿಗೆ ಜ್ವಾಲನರಸಿಂಹಮೂರ್ತಿಗೆ || ಖುಳ ಖುಳನೆ ಖುಳನೆಂದು ಕೂಗಲು ಕೋಟಿ ಸಿಡಿಲಿನ ರಭಸದಿ ಜಲಧಿಯೊಳು ಘುಲುಘುಲನೆ ಕೂಗುತ ಅಧರ ದಿಗ್ಗಜ ನಡುಗಲು ಥಳ ಥಳನೆ ಥಳಯೆಂದು ಪಲ್ಗಳು ಮಿಂಚಿನಂದದಿ ಪೊಳೆಯಲು ಚೆಲುವ ಕೋರೆಯ ಮೂರ್ತಿಗೆ ನಮ್ಮ ಉಗ್ರನರಸಿಂಹಮೂರ್ತಿಗೆ || ಛಾಲದಲಿ ಶಿಶು ನಿಮ್ಮ ಕರೆಯಲು ಕಾಲಿಲೊದ್ದಾ ಖಳರನು ಲೀಲೆಯಿಂದಲಿ ಸಿಡಿಲು ಭುಗಿ ಭುಗಿ ಉರಿಯ ಉಕ್ಕಿನ ಕಂಭದಿ ಖೂಳ ದೈತ್ಯನ ಉಗುರಿನಿಂದಲಿ ಸೀಳಿ ಹೊಟ್ಟೆ ಕರುಳಿನ ಮಾಲೆಯನು ಕೊರಳೊಳಗೆ ಧರಿಸಿದ ಜ್ವಾಲನರಸಿಂಹಮೂರ್ತಿಗೆ ಪ್ರ- ಜ್ವಾಲನರಸಿಂಹಮೂರ್ತಿಗೆ || ಹರನು ವಾರಿಜಭವನು ಕರಗಳ ಮುಗಿದು ಜಯ ಜಯವೆನುತಲಿ ತರಳ ಪ್ರಹ್ಲಾದನನು ತಾವಾಗ ಕರೆದು ಸ್ತುತಿಸಲು ಪೇಳಲು ತೆರತೆರದಿ ಭೂಸುರರು ಸ್ತುತಿಸಲು ಸುರರು ಪೂಮಳೆಗರೆಯಲು ಸಿರಿಬರಲು ತೊಡೆಯಲ್ಲಿ ಧರಿಸಿದ ಶಾಂತನರಸಿಂಹಮೂರ್ತಿಗೆ ನಮ್ಮ ಶಾಂತನರಸಿಂಹಮೂರ್ತಿಗೆ || ವರವ ಬೇಡಿದಡೀವ ತಂದೆಯು ವರಗಳೆಲ್ಲವನೀವುತ ನಿರತದಿ ನಿಮ್ಮೆರಡು ತೊಡೆಯಲಿ ಶರೀರವಿರಲೆಂದೆನುತಲಿ ಕರುಣಿ ಕರುಣಿಸೊ ಕರುಣಿಸೆಂದರೆ ವರದ ಅಭಯವ ನೀಡುತ ಸಿರಿಯ ಕರುಣದಿ ಪೊರೆವ ಅಹೋಬಲ ಗಿರಿಯ ಪುರಂದರವಿಠಲಗೆ ನಮ್ಮ ಕರುಣಿ ಪುರಂದರವಿಠಲಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು