ಶಂಭೋ ಸುರಗಂಗಾಧರನೆ

ಶಂಭೋ ಸುರಗಂಗಾಧರನೆ

ಕೃತಿಕಾರರು-ಜಗನ್ನಾಥದಾಸರು ರಾಗ - ಮೋಹನ (ಜೀವನಪುರಿ) ಅಟತಾಳ(ದೀಪಚಂದ) ಶಂಭೋ ಸುರಗಂಗಾಧರನೆ ಪಾಲಿ- ಸಂಬಾರಮಣ ಲಿಂಗ ||ಪ|| ನಂಬಿದವರಘ ಕಾದಂಬಿನಿಪವನ ಹೇ- ರಂಬಜನಕ ಕರುಣಾಂಬುಧಿ ಗುರುವರ ||ಅ.ಪ|| ಇಳಿದೇರ ಇಂದುಮುಖ ಈಪ್ಸಿತ ಫಲ ಸಲಿಸುವ ಘನತ್ರಿಶೂಲಿ ಸಲೆ ನಂಬಿದೆನೋ ಹಾಲಾಹಲ ಕಂಠ , ಎನ್ನ ನೀ ಸಲಹೋ ಸಂತತ ರೌಪ್ಯಾಚಲವಾಸ ವರ ಪಂಪಾ- ನಿಲಯ ನಿರ್ಜರ ಸೇವಿತಾನಲ ನಳಿನಸಖ ಸೋಮೇಕ್ಷಣನೆ ಬಾಂ- ದಳ ಪುರಾಂತಕ ನಿಜ ಶರಣ ವ- ತ್ಸಲ ವೃಷಾರೋಹಣ ವಿಬುಧವರ ||೧|| ಮಾರಾರಿ ಮಹದೇವ ನಿನ್ನಯ ಪಾದ ವಾರಿಜ ದಳಯುಗ್ಮವ ಸಾರಿದೆ ಸತತ ಸರೋರುಹೇಕ್ಷಣನ ಹೃ- ದ್ವಾರಿಜದಲಿ ತೋರೋ ಗಾರು ಮಾಡದಲೆನ್ನ ಆರುಮೊಗನಯ್ಯ ಅಮಿತಗುಣಗಣ ವಾರಿನಿಧಿ ವಿಘತಾಘ ವ್ಯಾಳಾ ಗಾರವಿತ್ತ ಪವಿತ್ರ ಸುಭಗ ಶ- ರೀರ ದುರಿತಾರಣ್ಯ ಪಾವಕ ||೨|| ಧೃತ ಡಮರುಗ ಸಾರಂಗ ನಿನ್ನಯ ಪಾದ ಶತಪತ್ರಾರ್ಚಿಪರ ಸಂಗ ಸತತ ಪಾಲಿಸೊ ಜಗನ್ನಾಥವಿಠಲನ ಸಂ- ಸ್ತುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ ಶತಮುಖನ ಜೈಸಿದನ ಪುತ್ರನ ಪಿತನ ಜನಕನ ಕೈಲಿ ಕೊಲಿಸಿದೆ ಅತುಳಭುಜಬಲ ಭೂತಪತಿ ಪಾ- ರ್ವತಿ ಮುಖಾಬ್ಜೋದಯ ದಿವಾಕರ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು