ವೃಂದಾವನವೇ ಮಂದಿರವಾಗಿಹ

ವೃಂದಾವನವೇ ಮಂದಿರವಾಗಿಹ

( ರಾಗ ಸೌರಾಷ್ಟ್ರ ಆದಿತಾಳ) ವೃಂದಾವನವೇ ಮಂದಿರವಾಗಿಹ, ಇಂದಿರೆ ಶ್ರೀ ತುಲಸಿ ||ಪ|| ನಮ್ಮ ನಂದನ ಮುಕುಂದಗೆ ಪ್ರಿಯವಾದ ಚೆಂದಾದ ಶ್ರೀತುಲಸಿ || ಅ || ತುಲಸೀವನದಲ್ಲಿ ಇಹನೆಂಬೋದು ಶ್ರುತಿ ಸಾರುತಿದೆ ಕೇಳಿ ತುಲಸೀದರ್ಶನದಿಂದ ದುರಿತಗಳೆಲ್ಲ ಹರಿದು ಹೋಗೋದು ಕೇಳಿ ತುಲಸೀಸ್ಪರ್ಶದಿಂದ ದೇಹ ಪಾವನವೆಂದು ನೀವೆಲ್ಲ ತಿಳಿದು ಕೇಳಿ ತುಲಸಿ ಸ್ಮರಣೆ ಮಾಡಿ ಸಕಲಿಷ್ಟವ ಪಡೆದು ಸುಖದಲಿ ನೀವು ಬಾಳಿ || ಮೂಲ ಮೃತ್ತಿಕೆಯನು ಧರಿಸಿದ ಮಾತ್ರದಿ ಮೂರು ಲೋಕ ವಶವಾಹುದು ಮಾಲೆಗಳನೆ ಕೊರಳಲ್ಲಿಟ್ಟ ಮನುಜಕೆ ಮುಕ್ತಿಮಾರ್ಗವನೀವುದು ಕಾಲಕಾಲಗಳಲಿ ಮಾಡಿದ ದುಷ್ಕರ್ಮ ಕಳೆದು ಬಿಸುಟು ಹೋಗೋದು ಕಾಲನ ದೂತರ ಅಟ್ಟಿ ಕೈವಲ್ಯವ ಲೀಲೆಯ ತೋರುವುದು || ಧರೆಯೊಳು ಸುಜನರ ಮರೆಯದೆ ಸಲಹುವ ವರ ಲಕ್ಷ್ಮೀ ಶ್ರೀತುಲಸಿ ಪರಮಭಕ್ತರ ಪಾಪಗಳೆಲ್ಲ ತರಿದು ಪಾವನ ಮಾಡುವಳು ತುಲಸಿ ಸಿರಿ ಆಯು ಪುತ್ರಾದಿ ಸಂಪತ್ತುಗಳನಿತ್ತು ಹರುಷವೀವಳು ತುಲಸಿ ಪುರಂದರವಿಠಲನ್ನ ಚರಣಕಮಲದ ಸ್ಮರಣೆ ಕೊಡುವಳು ತುಲಸಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು