Skip to main content

ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ

( ರಾಗ ಮುಖಾರಿ ಆದಿತಾಳ)

ವಿಧಿನಿಷೇಧ ನಿನ್ನವರಿಗೆಂತೋ ಹರಿಯೆ ||
ವಿಧಿ ನಿನ್ನ ಸ್ಮರಣೆ ನಿಷೇಧ ವಿಸ್ಮೃತಿಯೆಂಬ
ವಿಧಿಯನೊಂದನು ಬಲ್ಲವಗಲ್ಲದೆ ||ಪ||

ಮಿಂದದ್ದೆ ಗಂಗಾದಿ ಪುಣ್ಯ ತೀರ್ಥಂಗಳು
ಬಂದದ್ದೆ ಪುಣ್ಯಕಾಲ ಸಾಧುಜನರು
ನಿಂದದ್ದೆ ಗಯಾ ವಾರಾಣಸಿ ಕುರುಕ್ಷೇತ್ರ
ಸಂದೇಹವಿಲ್ಲ ಮದ್ದಾನೆ ಪೋದುದೆ ಬೀದಿ ||

ನಡೆದದ್ದೆಲ್ಲವು ಲಕ್ಷ ಪ್ರದಕ್ಷಿಣೆ
ನುಡಿದದ್ದೆಲ್ಲ ಗಾಯತ್ರಿಮಂತ್ರಗಳು
ಕುಡಿವೋದೆಲ್ಲವು ಯಜ್ಞ್ಯಾದಿ ಹೋಮದ್ರವ್ಯ
ದೃಢಭಕ್ತರೇನು ಮಾಡಿದರದೆ ಮರಿಯಾದೆ ||

ಕಂಡದ್ದೆ ವಿಶ್ವಾದಿ ಮೂರ್ತಿಗಳು ಭೂ-
ಮಂಡಲದಿ ಶಯನವೇ ನಮಸ್ಕಾರ
ತಂಡತಂಡ ಕ್ರಿಯೆಗಳು ಹರಿಪೂಜೆ
ತೊಂಡರಾಗಿ ಬಿದ್ದಿಹ ಭಾಗವತರಿಗೆ ||

ಕೆಟ್ಟು ಹೋಗುವದು ಸಂಚಿತಾಗಾಮಿ
ಸುಟ್ಟು ಹೋಗುವುದು ಪಾಪಕರ್ಮಗಳು
ನಷ್ಟವಾದ ಪ್ರಾರಬ್ದ ಮೀರಿದ ಸೇವೆ
ಮೆಟ್ಟಿದ ಪಟ್ಟಣವೆಂಬೋ ಓಲಾಯಿತು ||

ಎಲ್ಲಿ ನೋಡಿದರಲ್ಲಿ ಪ್ರಾಯೋಪವೇಶ ಮ-
ತ್ತೆಲ್ಲಿ ನೋಡಿದರಲ್ಲಿ ಸಮಾಧಿ
ಎಲ್ಲೆಲ್ಲು ಪುರಂದರವಿಠಲನ ನಾಮವು
ಬಲ್ಲವಗಲ್ಲದೆ ಪಾಪಪುಣ್ಯಾದಲ್ಲೋ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: