ವಾಸುದೇವ ನಿನ್ನ ಮರ್ಮ ಕರ್ಮಂಗಳ

ವಾಸುದೇವ ನಿನ್ನ ಮರ್ಮ ಕರ್ಮಂಗಳ

( ರಾಗ ಸೌರಾಷ್ಟ್ರ ಛಾಪುತಾಳ) ವಾಸುದೇವ ನಿನ್ನ ಮರ್ಮ ಕರ್ಮಂಗಳ ದೇಶದೊಳಗೆ ನಾ ಹೇಳಲೊ ||ಪ|| ಬೇಸರದೆ ಎನ್ನ ಹೃದಯಕಮಲದಲ್ಲಿ ವಾಸವಾಗಿ ಸುಮ್ಮನಿದ್ದು ಕಾಯೊ, ಹರಿವಾಸುದೇವ || ತರಳತನದಲ್ಲಿ ತುರುವು ಕಾಯ ಹೋಗಿ ಒರಳಿಗೆ ಕಟ್ಟಿದ್ದು ಹೇಳಲೊ ದುರುಳತನದಲ್ಲಿ ಕೆನೆ ಮೊಸರನು ಕದ್ದು ನಿರತ ನೀ ತಿಂದದ್ದು ಹೇಳಲೊ || ನೆರೆಹೊರೆ ಮನೆಗಳ ಹೊಕ್ಕು ನೀ ಬೆಣ್ಣೆಯ ಅರಿಯದಂತೆ ಮೆದ್ದದ್ಹೇಳಲೊ ದುರುಳನಾವನೆಂದು ಬೆದರಿಸಿದವರಿಗೆ ಮರುಳುಗೊಳಿಸಿದ್ದು ಹೇಳಲೊ || ಮೌನಗೌರೀ ವ್ರತಗೋಸ್ಕರ ಮಕ್ಕಳ ಮಾವನ ಕೊಂದದ್ದು ಹೇಳಲೊ ನೀನಾಗಿ ತುರುಗಳ ಹಿಂಡು ಕಾಯಹೋದ ಹೀನತನವ ನಾ ಹೇಳಲೊ || ತಾನಾಗಿ ಹಾಲು ಕೊಟ್ಟೆನೆಂದು ಬಂದವಳ ಪ್ರಾಣವ ಕೊಂಡದ್ದು ಹೇಳಲೊ ನೀನಾಗಿ ನೆರೆಮನೆ ವಾರ್ತೆಗಳೆಲ್ಲ ನಾನಾಬಗೆ ಮಾಡಿದ್ಹೇಳಲೊ || ದುಷ್ಟ ಹಾವಿನ ಮೇಲೆ ತುಳಿದಂಥ ನಿನ್ನಯ ದಿಟ್ಟತನವ ನಾ ಹೇಳಲೊ ನೆಟ್ಟನೆ ಕಂಬವ ತಾಗಿ ದೈತ್ಯನ ಮೆಟ್ಟಿ ತುಳಿದದ್ದು ನಾ ಹೇಳಲೊ || ಹಿಡಿ ತುಂಬ ಅವಲಕ್ಕಿ ಸಂಪಾದನೆ ಮಾಡಿ ದೃಢತರ ಸಿರಿ ಕೊಟ್ಟದ್ಹೇಳಲೊ ಮಡದಿ ಮಾತಿಗೆ ನೀನಂಜಿ ಪಾರಿಜಾತ ಕಡು ಬೇಗ ತಂದದ್ದು ಹೇಳಲೊ || ಮಡದಿಮಗನ ತಂದು ಗುರುದಕ್ಷಿಣೆ ಕೊಟ್ಟು ಬಡವನ ಗೆಳೆಯನೆಂದ್ಹೇಳಲೊ ಒಡನೆ ಓಡುತ ದೈತ್ಯಗಂಜಿ ಗುಹೆಯೊ- ಳಡಗಿಕೊಂಡದ್ದು ನಾ ಹೇಳಲೊ || ಕಟ್ಟಿ ಏಳು ದಿನ ಮಳೆಗಳ ಸುರಿಸಲು ಬೆಟ್ಟವನೆತ್ತಿದ್ದು ನಾ ಹೇಳಲೊ ಅಟ್ಟಿಸಿಕೊಂಡು ನೀ ಯಾಗಶಾಲೆಗೆ ಹೋಗಿ ಹೊಟ್ಟೆಬಾಕನೆಂದು ಹೇಳಲೊ || ಧರೆಯನಾಳುವ ಶ್ರೀರಂಗಪಟ್ಟಣದಲ್ಲಿ ಸ್ಥಿರವಾಗಿ ನಿಂತದ್ದು ಹೇಳಲೊ ಕರುಣಿಸಿ ಬಾರಯ್ಯ ಪುರಂದರವಿಠಲ ಪರಮ ದಯಾಳುವೆಂದು ಹೇಳಲೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು