ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ

ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ

( ಖಮಾಜ್ ರಾಗ ದಾದರಾ ತಾಳ) ವಾಸುದೇವನಾಶ್ರಯಿಸದಿಹ ಉಪಾಸನ ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ||ಧ್ರುವ|| ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲಿಹ ವಸ್ತುಗಾಣದ ಜ್ಞಾನವ್ಯಾತಕೆ ಉದರಕುದಿಯು ಶಾಂತಿಹೊಂದದ ಸಾಧನೆ ಯಾತಕೆ ಬುಧರ ಸೇವೆಗೊದಗದಿಹ ಸ್ವಧನವ್ಯಾತಕೆ ||೧|| ಭಾವ ನೆಲೆಗೊಳ್ಳದಿಹ ಭಕುತಿದ್ಯಾತಕೆ ಕಾವನಯ್ಯನ ಕಾಣದಿಹ ಯುಕುತಿದ್ಯಾತಕೆ ದೇವದೇವನ ಸೇವೆಗಲ್ಲದ ಶಕುತಿದ್ಯಾತಕೆ ಹ್ಯಾವ ಹೆಮ್ಮೆ ಅಳಿಯದಿಹ ವಿರಕ್ತಿ ಯಾತಕೆ ||೨|| ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದಲಾಚರಿಸದಿಹ ಕವಿತ್ವವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತದಾಸೆಯು ಅಳಿಯದಿಹ ಸಿದ್ಧತ್ವವ್ಯಾತಕೆ ||೩|| ನೀತಿಮಾರ್ಗ ಅರಿಯದಿಹ ರೀತಿ ಅದ್ಯಾತಕೆ ಮಾತು ಮಿತಿಗಳಿಲ್ಲದವನ ಧಾತುವ್ಯಾತಕೆ ಪ್ರೀತಿ ಆದರಳಿದ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದತಿ ಉತ್ತಮವ್ಯಾತಕೆ ||೪|| ಮನವು ಸ್ಥಿರಗೊಳ್ಳದ ನಿತ್ಯ ಶ್ರವಣವ್ಯಾತಕೆ ನೆನವು ನೆಲೆಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನ ಮಹಿಪತಿಸ್ವಾಮಿಗಾಣದ ಜನುಮವ್ಯಾತಕೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು