Skip to main content

ವರುಷ ಕಾರಣವಲ್ಲ ಹರಿ ಭಜನೆಗೆ

( ರಾಗ ಕಾಂಭೋಜ ಅಟತಾಳ)

ವರುಷ ಕಾರಣವಲ್ಲ ಹರಿ ಭಜನೆಗೆ ||ಪ||
ಅರಿತು ತತ್ವಜ್ಞರು ಕೇಳಿ ಸನ್ಮುದದಿ ||ಅ||

ತರಳತನದಲಿ ಕಂಡ ಹರಿಯ ಧ್ರುವರಾಯನು
ಹಿರಿಯತಾನವನಪ್ಪ ಕಂಡನೇನೋ
ತರಳ ಪ್ರಹ್ಲಾದನು ನರಹರಿಯ ತಾ ಕಂಡ
ಹಿರಿಯನವನಪ್ಪ ತಾ ಮರೆಯಲಿಲ್ಲೇನೋ ||

ಹಿರಿದಾಗಿ ಬಹುಕಾಲ ಮರದ ಮೇಲೆ ಬಾಳುವ
ಇರುಳು ಗಣ್ಣಿನ ಗೂಬೆ ತಾ ದೊಡ್ಡದೆ
ಮರಿಯಾದ ಅರಗಿಣಿಯು ಹರಿ ಕೃಷ್ಣ ಎಂದೊದರೆ
ಮರಿ ದೊಡ್ಡದೆಂತೆಂದು ಪೇಳುವರು ಜನರು ||

ಸರುವದಾ ಒದರುವರು ಅರಣ್ಯವಾಸಿಗಳು
ಮರದಡಿಗೆ ಬಿದ್ದ ಎಲೆಗಳ ತಿನ್ನುತ
ಪರಮ ಪಾತಕಿ ಅಜಾಮಿಳನು ನಾರಗ ಎನಲು
ಭರದಿಂದ ಸಲಹಿದನು ಪುರಂದರವಿಠಲ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: