Skip to main content

ವಂದಿಸುವೆನು ನಿತ್ಯ ವಂದಿಸುವೆನು

(ಮುಖಾರಿ ರಾಗ ಝಂಪೆ ತಾಳ)

ವಂದಿಸುವೆನು ನಿತ್ಯ ವಂದಿಸುವೆನು ||ಪ||
ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು
ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ||ಅ.ಪ||

ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು
ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು
ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ
ಮಾಧುರ್ಯದೊಳು ಜನರ ಪ್ರೀತಿಕರನಾದವಗೆ ||೧||

ಭಯವಿವರ್ಜಿತನಾಗಿ ಬಹುಲೋಭವನು ತೊರೆದು
ಕ್ಷಯಮಾಡಿ ಮೋಹವನು ಹಿಂದುಗಳೆದು
ನಯವಿಧದ ಜ್ಞಾನವನು ದಶಲಕ್ಷಣಗಳಿಂದ
ನಿಯತವತಿ ಕೈಕೊಂಡನಕ್ಷರತ್ರಯದೊಳು ||೨||

ಏಳು ಕೋಟಿಯ ಮಹಾಮಂತ್ರಬಾಹ್ಯದ ಕೋಟೆ
ನಾಲಿಗೆ ವಶಮಾಡಿ ನವದ್ವಾರಗಳನು
ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ
ಸಾಲುನಾದಗಳೆಂಬ ಕಹಳೆವಿಡಿದವಗೆ ||೩||

ದಶವಿಧದ ಘೋಷಗಳ ಬಿಂದು ಪ್ರತಾಪದಿಂ
ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ
ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ
ಎಸುವ ದುರ್ಗಾಂತರಕೆ ತಾಗಲಿಟ್ಟವಗೆ ||೪||

ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ
ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು
ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು
ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ ||೫||

ಪ್ರತ್ಯಾಹಾರದಿಂ ಮಣಿಹರಕದ ಮನೆಯ
ಕಿತ್ತು ಕಿಚ್ಚಂ ಹಾಕಿ ಧ್ಯಾನಯೋಗದಿ ಬಂದ
ಮತ್ತೆ ಸಂಶುದ್ಧವೆಂಬರಮನೆಯ ಕೋಲಾಹಲದಿ
ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು ||೬||

ಜ್ಞಾನಮಂಟಪವೆಂಬ ರಾಜಮನೆಯೊಳು ನಿಂತು
ಮಾನದೊಳು ಮೂಲಬಂಧದಿ ಆರುಶಕ್ತಿಗಳ
ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ-
ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ ||೭||

ಖೇಚರಿಯ ಯೋಗದಿಂ ಕರಣ ಚತುಷ್ಟಯದ
ನೀಚ ಪ್ರಧಾನಿಗಳ ನೆಗಳವನಿಕ್ಕಿ
ಸೂಚನೆಯ ಕಾಲ ಕರ್ಮದ ಕಣ್ಣುಗಳ ಕಿತ್ತು
ಯೋಚನೆಯ ಮಾಡಿದನು ವೀರಾಸನದೊಳು ||೮||

ಮಾಯಾ ಪ್ರಪಂಚವೆಂಬ ನ್ಯಾಯ ನಾಯಕರ
ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು
ಪಾಯದಿಂದಾರು ವಿಕಾರಗಳ ಕೈಗಟ್ಟಿ
ಬಾಯ ಹೊಯ (/ಹೊಯ್ದ?) ಗುರುವಿಗೆರಗುವೆನು ನಾನು ||೯||

ಇಪ್ಪತ್ತೊಂದು ಸಾವಿರವಾರು ನೂರಾದ
ಉತ್ಪವನ ಉಶ್ವಸ ನಿಶ್ವಾಸಗಳನೆಲ್ಲ
ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು
ಒಪ್ಪುವನು ಅರೆನೇತ್ರದಿಂದ ಬೆಳಗುವನು ||೧೦||

ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ
ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ
ವರ್ಣಾಶ್ರಮಂಗಳನು ಏಕವನು ಮಾಡಿಯೆ
ನಿರ್ಣಯಿಸಿಕೊಂಡು ತಾ ನೋಡುವವಗೆ ||೧೧||

ನುತಿಕರ್ಮದಿಂದಷ್ಟ ಆತ್ಮಕರ ಆಸನವ
ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ
ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ
ಕೃತಿಕುದುರೆಗಳ ಯುಕುತಿಯಲ್ಲಿ ಪಿಡಿದವಗೆ ||೧೨||

ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು
ಕಾದು ಇರುತಿಹ ಹರಿಗಳಾರಬಿಂದುವಿನಿಂ
ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ
ಆದಿಕರಣಿಕನನ್ನು ಹಿಡಿದವನಿಗೆ ||೧೩||

ದಾತೃತ್ವದಿಂ ಸತ್ಯಲೋಕವನು ತಾ ಕಂಡು
ಕಾತುರದಿ ಆಕಾರದುರ್ಗವನು ಹತ್ತಿ
ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ
ಈ ತೆರೆದ ಮಹಾದುರ್ಗವನು ಕಂಡವಗೆ ||೧೪||

ಅಣುಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು
ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ
ಗುಣನಿಧಿಯು ವರಾಹ ತಿಮ್ಮಪ್ಪರಾಯನನು
ಕಣ್ಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ ||೧೫||

---- ನೆಕ್ಕರ ಕೃಷ್ಣದಾಸರ ರಚನೆ

ದಾಸ ಸಾಹಿತ್ಯ ಪ್ರಕಾರ: 
ಬರೆದವರು: