ರಾಮ ಗೋವಿಂದ ಸೀತಾರಾಮ ಗೋವಿಂದ

ರಾಮ ಗೋವಿಂದ ಸೀತಾರಾಮ ಗೋವಿಂದ

( ರಾಗ ಸೌರಾಷ್ಟ್ರ ಅಟತಾಳ) ರಾಮ ಗೋವಿಂದ ಸೀತಾರಾಮ ಗೋವಿಂದ || ತೃಪ್ತಿ ಅಹುದೆ(/ಹೌದೆ) ಹೆತ್ತ ತಾಯಿ ಇಕ್ಕದನಕ ಭಕ್ತಿ ಅಹುದೆ(/ಹೌದೆ) ಭಕ್ತಜನರ ಸಲಹದನಕ ಮುಕ್ತಿ ಅಹುದೆ(/ಹೌದೆ) ಭಾವಶುದ್ದಿ ಇಲ್ಲದನಕ ಚಿತ್ತಶುದ್ದಿ ಆತ್ಮನಿಜವು ತಿಳಿಯದನಕ || ಓದಲೇತಕೋ ಮನದಿ ವಿಜ್ಞಾನವಿಲ್ಲದನಕ ಭೇದವೇತಕೊ ಗತಿಯು ಗಮನ ತಿಳಿಯದನಕ ಕದನವೇತಕೊ ಭುಜದಿ ಶಕ್ತಿ ಇಲ್ಲದನಕ ವಾದವೇತಕೊ ಶ್ರುತಿಯ ಶಾಸ್ತ್ರ ತಿಳಿಯದನಕ || ನಳಿನವಿದ್ದರೇನು ತುಂಬಿ ಒದಗದನಕ ದಳವಿದ್ದರೇನು ಧೈರ್ಯ ಕೂಡತನಕ ಲಲನೆ ಇದ್ದರೇನು ಪುತ್ರರಿಲ್ಲದನಕ ಚೆಲುವನಾದರೇನು ವಿದ್ಯೆ ಕಲಿಯದನಕ || ವನವಿದೇತಕೊ ಶುಕ ಕೋಕಿಲ ಇಲ್ಲದನಕ ತನುವಿದೇತಕೊ ಪರರ ಹಿತಕೆ ಬಾರದನಕ ಮನೆಯಿದೇತಕೊ ಅತಿಥಿ ಬಂದಾರಿಲ್ಲದನಕ ಧನವಿದೇತಕೊ ದಾನಧರ್ಮಕ್ಕೊದಗದನಕ || ಹರಿಯ ಚಿಂತೆ ಇರಲು ಅನ್ಯ ಚಿಂತೆಯೇತಕೊ ಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊ ಹರಿಯು ಒಲಿದ ಮನುಜನಿಗೆ ದೈನ್ಯವೇತಕೊ ಸಿರಿವರದ ಪುರಂದರವಿಠಲನಿರಲು ಭಯವು ಏತಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು