ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ

ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ

(ಪೀಲೂ ( ಜಂಜೂಟಿ) ರಾಗ , ಆದಿತಾಳ(ಕಹರವಾ) ) ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೊ ಕರುಣಾಸಾಗರ ||ಪ|| ಅರಿಯರೊ ನೀನಲ್ಲದೆ ಮತ್ತನ್ಯ ದೈವರ ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೊ ನಿನ್ನಂಘ್ರಿಸೇವೆ ಪ್ರತಿವಾಸರ ಅರಿಯರೊ ಪರತತ್ವವಲ್ಲದೆ ಇತರ ವಿಚಾರ ||೧|| ಮೂಕ ಬಧಿರರಂತಿಪ್ಪರೊ ನೋಳ್ಪ ಜನಕೆ ಕಾಕುಯುಕುತಿಗಳನವರು ತಾರರೊ ಮನಕೆ ಸ್ವೀಕರಿಸರನರ್ಪಿತವೊಂದು ಕಾಲಕೆ ಆ ಕೈವಲ್ಯ ಭೋಗ ಸುಖ ಅವರಿಗೆ ಬೇಕೆ ||೨|| ಜಯಾಜಯ ಲಾಭಾಲಾಭ ಮಾನಾಪಮಾನ ಭಯಾಭಯ ಸುಖ-ದುಃಖ ಲೋಷ್ಟಕಾಂಚನ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ ಶ್ರೀಯರಸ ಚಿಂತಿಸುವರೊ ನಿನ್ನ ಆಧೀನ ||೩|| ಈಶಿತವ್ಯರೆಂತಿಪ್ಪರೇಕಾಂತ ಭಕ್ತರು ದೇಶಕಾಲೋಚಿತ ಧರ್ಮಕರ್ಮಾಸಕ್ತರು ಆಶಾಕ್ರೋಧ ಲೋಭ ಮೋಹ ಪಾಶಮುಕ್ತರು ಈ ಸುಜನರೇ ಶಾಪಾನುಗ್ರಹ ಶಕ್ತರು ||೪|| ಕಂಡಕಂಡಲ್ಲಿ ವಿಶ್ವರೂಪ ಕಾಂಬರು ಉಂಡು ಉಣಿಸಿದ್ದೆಲ್ಲ ನಿನ್ನ ಯಜ್ಞವೆಂಬರು ಬಂಡುಣಿಯಂದದಿ ನಾಮಾಮೃತವನುಂಬರು ಹೆಂಡಿರು ಮಕ್ಕಳು ನಿನ್ನ ತೊಂಡರೆಂಬರು ||೫|| ಬಿಡರು ತಮ್ಮ ಸ್ವಧರ್ಮಗಳೇನು ಬಂದರು ಬಿಡರು ದೈನ್ಯ ಒಬ್ಬರಿಗು, ಲೋಕವಂದ್ಯರು ಪಿಡಿಯರು ನಿನ್ನ ದ್ವೇಷಿಗಳಿಂದೇನು ಬಂದರು ಕೊಡುವರು ಬೇಡಿದಿಷ್ಟಾರ್ಥ , ನಿತ್ಯಾನಂದರು ||೬|| ನಗುವರೊ ರೋದಿಸುವರೊ ನಾಟ್ಯವಾಡೋರೊ ಬಗೆಯರೊ ಬಡತನ ಭಾಗ್ಯ ಭಾಗವತರು ತೆಗೆಯರೊ ನಿನ್ನಲ್ಲಿ ಮನವೊಮ್ಮೆಯಾದರು ಜಗನ್ನಾಥವಿಠಲ ನಿನ್ನವರೇನು ಧನ್ಯರೊ ||೭| (ಬಂಡುಣಿ= ದುಂಬಿ, ಭ್ರಮರ ತೊಂಡ = ಭಕ್ತ , ಸೇವಕ, ಗುಲಾಮ)
ದಾಸ ಸಾಹಿತ್ಯ ಪ್ರಕಾರ
ಬರೆದವರು