ರಂಗನೊಲಿದ (ದ್ರೌಪದಿಯ ಮಾನ ಸಂರಕ್ಷಣೆ)

ರಂಗನೊಲಿದ (ದ್ರೌಪದಿಯ ಮಾನ ಸಂರಕ್ಷಣೆ)

( ರಾಗ ಸೌರಾಷ್ಟ್ರ. ಆದಿ ತಾಳ) ರಂಗನೊಲಿದ ನಮ್ಮ ಕೃಷ್ಣನೊಲಿದ||ಪ|| ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ|| ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರು ಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲು ಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲು ಧರ್ಮರಾಯ ಧಾರಿಣಿ ದ್ರೌಪದಿಯ ಸೋತನು || ಸೋತನೆಂದು ದುರ್ಯೋಧನ ಸಂತೋಷದಿಂದಲಿ ತನ್ನ ದೂತರಟ್ಟಿ ಪಾಂಡವರ ಬದುಕು ತರಿಸಿದ ಜಾತಿ ಮುತ್ತು ಚಿನ್ನ ಬೆಳ್ಳಿ ಆನೆ ಕುದುರೆಗಳ ಸಹಿತ ಭೀತಿಯಿಲ್ಲದಲೆ ಭಂಡಾರಕಿಟ್ಟನು || ಮುದ್ದುಮುಖದ ದ್ರೌಪದಿಯ ಮುಂದೆ ಮಾಡಿ ತನ್ನಿರೆಂದು ತಿದ್ದಿ ತನ್ನ ಮಾನವರಿಗೆ ತಿಳಿಯಹೇಳಿದ ಮುದ್ರೆ ಮಾನವರು ಬಂದು ದ್ರೌಪದಿಯ ಮುಂದೆ ನಿಂತು ಬುದ್ಧಿಯಿಂದಲೆಲ್ಲ ಬಿನ್ನಹ ಮಾಡಲು || ಅಮ್ಮ ಕೇಳೆ ಅರಸುಗಳು ಅಚ್ಚಪಗಡೆ ಪಂಥವಾಡಿ ಹಮ್ಮಲಿಂದ ಜೂಜನಿಟ್ಟು ಲೆತ್ತವಾಡಲು ಧರ್ಮರಾಯ ಸೋತನೆಂದು ಸತ್ಯವಚನ ಕೌರವಂಗೆ ನಿಮ್ಮ ಇಂಬು ನಿಲವು ಕರಿಯ ಕೊಟ್ಟರೆಂದರು || ಪಟ್ಟಪದವಿ ಅವರಿಗಾಗಿ ಬಡವರಾಗಿ ಇದ್ದೇವೆಂದರೆ ಕೆಟ್ಟ ಪಗಡೆಪಂಥ ಜೂಜಿನ್ನೆಲ್ಲಿ ಒದಗಿತು ದುಷ್ಟ ಕೌರವನು ಎನ್ನ ಲಜ್ಜೆ ನಾಚಿಕೆಯ ಕಂಡು ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ || ಬಾಗಿ ಬಳುಕಿ ಬಿಕ್ಕಿ ತನ್ನ ಕಣ್ಣ ನೀರು ಸುರಿವುತಲಿ ಮಾಗಿಯ ಕೋಕಿಲೆಯಂತೆ ಕಾಯನೊಲವುತ ಆಗ ಕೃಷ್ಣನಂಘ್ರಿಗಳ ಅಂತರಂಗದಲ್ಲಿ ನೆನೆದು ಸಾಗಿ ಸಾಗಿ ಹೆಜ್ಜೆಯಿಡುತ ಸಭೆಗೆ ಬಂದಳು || ವೀರ ಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತನು ಕ್ರೂರ ಕೌರವ ದುಶ್ಯಾಸನ ಗುರುಹಿರಿಯರು ಸಾರುತಿಪ್ಪ ಭಟರು ಪರಿವಾರ ರಾಹುತರ ನೋಡಿ ಧಾರಿಣಿಗೆ ಮುಖವ ಮಾಡಿ ನಾಚಿ ನಿಂತಳು || ಚಂದದಿಂದ ದುರ್ಯೋಧನ ಚದುರೆ ದ್ರೌಪದಿಯ ಕೂಡೆ ಮುಂದನರಿಯದ ಮುಗುಳುನಗೆಯ ಮಾತನಾಡಿದ ಹಿಂದೆ ಸ್ವಯಂವರದಲ್ಲಿ ಐವರಿಗೆ ಆದ ಬಾಲೆ ಇಂದು ಎನ್ನ ಪಟ್ಟದರಸಿಗೊಪ್ಪಿತೆಂದನು || ಮಲ್ಲಿಗೆಯ ಮುಡಿಯ ನಾರಿ ಮುದ್ದು ಮುಖದ ವೈಯಾರಿ ಚಲ್ಲೆಗಂಗಳ ದ್ರೌಪದಿ ಬಾರೆಯೆಂದನು ಬಿಲ್ಲು ಎತ್ತಲಾರದವನೆ ಭಂಡಾರವ ಕಾದಿದ್ದವನೆ ಹಲ್ಲು ಕೀಳುವರೈವರು ಬೇಡವೆಂದಳು || ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ ನಿಚ್ಚ ಮುತ್ತಿನಂತೆ ಬಿಂಬಾಧರೆಯೆಂದನು ಹೆಚ್ಚು ಮಾತನಾಡದಿರೋ ಹೆರರ ಹೆಣ್ಣ ನೋಡದಿರೊ ನುಚ್ಚು ಮಾಡುವರೈವರು ಬೇಡವೆಂದಳು || ಮಟ್ಟಿಬಡಕರೈವರಿಗೆ ಮಡದಿಯಾಗುವುದು ಸಲ್ಲ ಪಟ್ಟೆಮಂಚಕೊಪ್ಪುವಂತೆ ಬಾರೆಯೆಂದನು ಕೆಟ್ಟ ಮಾತನಾಡದಿರೋ ಕ್ರೋಧದಿಂದ ನೋಡದಿರೊ ರಟ್ಟೆ ಕೇಳುವರೈವರು ಬೇಡವೆಂದಳು || ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ ತೊಡೆಯ ಮೇಲೆ ಒಪ್ಪುವಂತೆ ಬಾರೆಯೆಂದನು ಬೆಡಗು ಮಾತನಾಡದಿರೋ ಭೀಮಸೇನನ ಗದೆಯ ನಿನ್ನ ತೊಡೆಯ ಮೇಲೆ ಒಪ್ಪುವದು ಬೇಡವೆಂದಳು || ಎಷ್ಟು ಬಿಂಕ ಬಡಿವಾರವು ಹೆಣ್ಣು ಬಾಲೆಗಿವಳಿಗೆಷ್ಟು ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ಉಟ್ಟ ಸೀರೆ ಉಡಿಯಲವನ ಉಯಿಕೊ ತೀರಲೆಂದು ದೃಷ್ಟಿಯಿಂದ ದುಶ್ಶಾಸನಗೆ ಸನ್ನೆಮಾಡಿದ || ಮಚ್ಚ ಕೂರ್ಮ ವರಹ ಕಾಯೋ ಮುದ್ದು ನರಸಿಂಹ ಕಾಯೋ ಹೆಚ್ಚಿನ ವಾಮನನೆ ಕಾಯೊ ಭಾರ್ಗವ ಕಾಯೊ ಅಚ್ಚ ರಾಮ ಕೃಷ್ಣ ಕಾಯೊ ಬುದ್ಧ ಕಲ್ಕಿ ರೂಪ ಕಾಯೊ ಸಚ್ಚಿದಾನಂದನೆ ಕಾಯೊ ಸ್ವಾಮಿಯೆಂದಳು || ಸಜ್ಜನರ ಪ್ರಿಯ ಕಾಯೊ ಸಾಧುಗಳ ರಕ್ಷಕನೆ ಕಾಯೊ ನಿರ್ಜರವಂದಿತನೆ ಕಾಯೊ ನರಹರಿ ಕಾಯೊ ಅರ್ಜುನನ ಸಖನೆ ಕಾಯೊ ಅನಂತಮೂರುತಿ ಕಾಯೊ ಲಜ್ಜೆ ನಾಚಿಕೆಯ ಕಾಯೊ ಸ್ವಾಮಿಯೆಂದಳು || ದುರುಳ ದುಶ್ಯಾಸನನು ಬಂದು ದ್ರೌಪದಿಯ ಮುಂದೆ ನಿಂದು ಕರವ ಪಿಡಿದು ಸೆರಗ ಹಿಡಿದು ನಿರಿಯ ಸೆಳೆಯಲು ಮರುಳು ಆಗದಿರೊ ನಿನ್ನ ರಕ್ತದೊಳು ಮುಡಿಯ ಅದ್ದಿ ಕರುಳು ದಂಡೆಯನೆ ಮಾಡಿ ಮುಡಿವೆನೆಂದಳು || ಕಲಹಗಂಟ ಹೆಣ್ಣೆ ನಿನ್ನ ಘಾಸಿ ಮಾಡುವೆನೆಂದು ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಿಗೆಯ ಕಿತ್ತು ಎರಡು ಪಲ್ಲಿನಲ್ಲಿ ಕೇಶನ್ಹಿಕ್ಕಿಕೊಂಬೆನೆಂದಳು || ಬೆನ್ನಿನಲ್ಲಿ ಪೆಟ್ಟನಿಕ್ಕಿ ಭಂಡು ಮಾಡುವೆನೆಂದು ಕನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ರನ್ನೆವೀರ ಬೊಬ್ಬೆನಿಕ್ಕಿ ರಭಸದಿಂದ ಸಾರುತಲಿ ಪನ್ನಗಶಯನ ಕೃಷ್ಣ ಕಾಯೊ ಎಂದಳು || ಸಾರಿದವರ ಪೊರೆವ ಕರುಣಿ ಸಾಗರಶಯನ ಕೃಷ್ಣ ನಾರಿ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ಸುರುತಿ ಕಂಭವತಿ ಸಣ್ಣ ಬಣ್ಣ ಸೀರೆಗಳು ಮೇರುವಿನ ಬೆಟ್ಟದಂತೆ ಮಹಿಮೆ ತೋರಿದ || ಹೊಂದಿದವರ ಪೊರೆವ ಕರುಣಿ ಸಿಂಧುಶಯನ ಶ್ರೀ ಕೃಷ್ಣ ನಲ- ವಿಂದ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ಒಂದು ಎರಡು ಮೂರು ನಾಲ್ಕು ಕೋಟಿ ಸಂಖ್ಯೆ ಸೀರೆ ಸುಲಿದು ನೊಂದು ಬೆಂದು ದುಶ್ಶಾಸನನು ನಾಚಿ ಕುಳಿತನು || ನೋಡಿದರು ದ್ರೌಪದಿಯ ಮಾನರಕ್ಷಲೀಲೆಗಳ ಮಾಡಿದರು ಮಾಧವನ ಮುದ್ದು ಸ್ತೋತ್ರವ ಮೂಢ ಕೌರವನ ಕೂಡ ಮಾನಿನಿ ದ್ರೌಪದಿಯು ಲೆತ್ತ- ವಾಡಿ ತನ್ನ ಪತಿಗಳೈವರ ಗೆದ್ದಳು || ಕೇಸು ಮುಡಿಯ ಕಟ್ಟಿದಳು ಕೈಯ ಕಾಲ ಮಣ್ಣನೊರೆಸಿ ಸಾಸಿರನಾಮದ ಒಡೆಯ ಸುರರ ಪಾಲಕ ವಾಸಿವುಳ್ಳ ಕೃಷ್ಣ ಎನ್ನ ವಹಿಸಿ ಕಾಯಿದಿ ಎಂದು ಸಂ- ತೋಷದಿಂದ ದ್ರೌಪದಿಯು ಮನೆಗೆ ಬಂದಳು || ಭಕ್ತಿಯಿಂದ ದ್ರೌಪದಿಯ ಮಾನರಕ್ಷಲೀಲೆಗಳ ಯುಕ್ತಿಯಿಂದ ಹಾಡಿ ಪಾಡಿ ಕೇಳುವವರಿಗೆ ಸಕಲದೋಷಪರಿಹಾರ ಸಂತಾನಫಲಗಳುಂಟು ಮುಕುತಿ ಕೊಡುವನು ನಮ್ಮ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು