ಯಾರೂ ಸಂಗಡ ಬಾಹೋರಿಲ್ಲ

ಯಾರೂ ಸಂಗಡ ಬಾಹೋರಿಲ್ಲ

(ರಾಗ ರೇಗುಪ್ತಿ ಅಟತಾಳ) ಯಾರೂ ಸಂಗಡ ಬಾಹೋರಿಲ್ಲ ನಾರಾಯಣನ ನಾಮ ನೆರೆಬಾಹೋದಲ್ಲದೆ || ಹೊತ್ತು ನವಮಾಸ ಪರ್ಯಂತವು ಗರ್ಭದಲಿ ಹೆತ್ತು ಬಲು ನೋವು ಬೇನೆಗಳಿಂದಲಿ ತುತ್ತು ಬುತ್ತಿಯ ಕೊಟ್ಟು ಸಲಹಿದಂಥಾ ತಾಯಿ ಅತ್ತು ಕಳಹುವಳಲ್ಲದೆ ನೆರೆ ಬಹಳೆ || ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ ಭಾವಶುದ್ಧದಿ ಧಾರೆಯೆರೆಸಿಕೊಂಡ ದೇವಿ ತನ್ಸತಿ ತಲೆಗೆ ಕೈಯಿಟ್ಟುಕೊಂಡು ಇ- ನ್ನಾವ ಗತಿಯೋ ಎಂದು ಅಳುತುಳಿವಳಲ್ಲದೆ || ಮತ್ತೆ ಪ್ರಾಣರು ತನುವ ಬಿಟ್ಟು ಹೋಗುವಾಗ ಎತ್ತಿವನ ಹೊರಗೊಯ್ದು ಹಾಕೆಂಬರು ಎತ್ತಿದ ಕಸಕಿಂತ ಕಡೆಯಾಯಿತೀ ದೇಹ ವಿತ್ತವೆಷ್ಟಿದ್ದರು ಫಲವಿಲ್ಲ ಪ್ರಾಣಿ || ಪುತ್ರಮಿತ್ರರು ಸಕಲಬಂಧುಗಳು ಸತಿಯರು ಹತ್ತಿರದೊಳ್ ನಿಂತು ನೋಡುವರಲ್ಲದೆ ಮೃತ್ಯುದೇವಿಯು ಬಂದು ಪ್ರಾಣವನು ಸೆಳೆವಾಗ ಜಾತ್ರೆ ಜನರಷ್ಟಿದ್ದು ಏನು ಮಾಡುವರು || ಯಮನ ದೂತರು ಬಂದು ಪಾಶವನು ತಗಲ್ಹಾಕಿ ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು