ಯಾದವ ನೀ ಬಾ

ಯಾದವ ನೀ ಬಾ

(ರಾಗ ಕಾಂಭೋಜ ಏಕತಾಳ) ಯಾದವ ನೀ ಬಾ ಯದುಕುಲನಂದನ | ಮಾಧವ ಮಧುಸೂಧನ ಬಾರೋ || ಸೋದರ ಮಾವನ ಮಧುರೆಲಿ ಮಡುಹಿದ ಯ- ಶೋದೆಕಂದ ನೀ ಬಾರೋ || ಪ|| ಶಂಖಚಕ್ರವು ಕೈಯಲಿ ಹೊಳೆಯುತ | ಬಿಂಕದ ಗೋವಳ ನೀ ಬಾರೋ || ಅಕಳಂಕಮಹಿಮನೆ ಆದಿನಾರಾಯಣ | ಬೇಕೆಂಬ ಭಕುತರಿಗೊಲಿಬಾರೋ || ೧|| ಕಣಕಾಲಂದುಗೆ ಘಲುಘಲುರೆನುತಲಿ | ಝಣಝಣ ವೇಣುನಾದದಲಿ || ಚಿಣಿಕೋಲ್ ಚೆಂಡು ಬುಗುರಿಯನಾಡುತ | ಸಣ್ಣ ಸಣ್ಣ ಗೋವಳರೊಡಗೂಡಿ || ೨ || ಖಗವಾಹನನೇ ಬಗೆಬಗೆ ರೂಪನೇ | ನಗುಮೊಗದರಸೇ ನೀ ಬಾರೋ || ಜಗದೊಳು ನಿನ್ನಯ ಮಹಿಮೆಯ ಪೊಗಳುವೆ | ಪುರಂದರವಿಟ್ಠಲ ನೀ ಬಾರೋ || ೩||
ದಾಸ ಸಾಹಿತ್ಯ ಪ್ರಕಾರ
ಬರೆದವರು