ಮೆಚ್ಚನಯ್ಯ ಹರಿ ಒಪ್ಪನಯ್ಯ

ಮೆಚ್ಚನಯ್ಯ ಹರಿ ಒಪ್ಪನಯ್ಯ

(ರಾಗ ಯದುಕುಲಕಾಂಭೋಜ ಆದಿ ತಾಳ ) ಮೆಚ್ಚನಯ್ಯ ಹರಿ ಒಪ್ಪನಯ್ಯ ||ಪ|| ರಚ್ಚೆಮುಚ್ಚೆ ಮಾಡಿ ಹರಿಯ ಮೆಚ್ಚಿಸುವೆನೆಂದರೆ ||ಅ|| ಊರೆಲ್ಲರು ಅರಿಯುವಂತೆ ಅರುಣೋದಯದಲ್ಲಿ ಎದ್ದು ನೀರೊಳಗಿನ ಕಪ್ಪೆಯಂತೆ ಮುಳುಗಿ ಮುಳುಗಿ ಎಳುವವರ || ಚರ್ಮವ ತೊಳೆದಿಟ್ಟು ಗೋಪಿಚಂದನ ರೇಖೆಯ ಬರೆದು ಹೆಮ್ಮೆ ವೇಷದಿಂದ ಕುಣಿದು ಡಂಭಕತನದವರ || ಪಟ್ಟೆ ಮಡಿಯನುಟ್ಟುಕೊಂಡು ಪೆಟ್ಟಿಗೆ ಹರವಿಟ್ಟುಕೊಂಡು ಕೊಟ್ಟೆ ಎತ್ತಿನ ಘಂಟೆಯಂತೆ ನುಡಿವುತಿಹರ ಮಂತ್ರವನ್ನು || ಮನವನೊಂದು ಕಡೆಯಲಿಟ್ಟು ತನುವನಡ್ಡ ಕೆಡಹಿಕೊಂಡು ಮರದ ಮೇಲಿನ ಕೋತಿಯಂತೆ ಮಾಡುವ ನಮಸ್ಕಾರವನ್ನು || ದೇವಾರಾಧನೆಯೆಂದು ಬ್ರಾಹ್ಮಣರುಂಡು ದಣಿಯಲಿಲ್ಲ ನರಿನಾಯಿ ಕರೆದು ತಂದು ನಾಯಿಬಾಯಿ ತೊಳೆವರ || ಹರಟೆಗಾಗಿ ಹರಸಿಕೊಂಡು ತಿರುಪತಿ ಯಾತ್ರೆಗೆ ತೆರಳಿ ಮುಡುಪು ಕಟ್ಟಿಕೊಂಡು ಹೋಗಿ ಬಿಡದಿ ಹಾಕಿ ಮಿಡುಕುವರ || ಮನವನೊಂದು ಕಡೆಯಲಿಟ್ಟು ತನುವನಡ್ಡ ಕೆಡಹಿಕೊಂಡು ಪುರಂದರವಿಠಲನ್ನ ಒಲಿದು ಪೂಜೆಯ ಮಾಡುವರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು