ಮುಕ್ಕಾ ನಿನ್ನೊಡನೆ.

ಮುಕ್ಕಾ ನಿನ್ನೊಡನೆ.

(ರಾಗ ಮಧ್ಯಮಾವತಿ. ಛಾಪು ತಾಳ ) ಮುಕ್ಕಾ ನಿನ್ನೊಡನೆ ನೋಡೊ ಮುಕ್ಕಾ ||ಪ || ಮುಕ್ಕಾ ನಿನ್ನೊಡನೆ ನೋಡೋ ಸೊಕ್ಕಬೇಡವೆಲೊ ಮುಂದೆ ಕಕ್ಕಸ ಪಡುವಿ ಕನ್ನಡಿ ಒಡೆದರೆ ದಕ್ಕಿಸಿಕೊಂಬ್ಯಾ ಎಲ ಹುಚ್ಚು ಮೂಳ ||ಅ|| ಗುರುಹಿರಿಯರ ನಿಂದೆ ಮಾಡಿ ತಾಯಿತಂದೆಗಳ ಚರಣಸೇವೆಗಳ ಹೋಗಾಡಿ ಪರಿಪರಿ ನೀನು ಬರಿದೆ ಆಲಸ್ಯವನ್ನೆ ಮಾಡಿ ಎಲೊ ಎಲೊ ಖೋಡಿ ಭರದಿಂದೆಳೆವರು ಕಾಲೆಮದೂತರು ಕೊರಳ ಕೊಯ್ವರೊ ಎಲ ಹುಚ್ಚು ಮೂಳ || ನಿನ್ನ ದೇಹವ ನೋಡಿಕೊಂಬೆ ನಿನಗೆ ನೀನೇ ಚೆನ್ನಾಗಿದ್ದೇನೆಂತೆಂಬೆ ಭ್ರಮಿಸಿ ಹುಚ್ಚು ಕುನ್ನಿಯಂದದಿ ಹೊಗಳಿಕೊಂಬೆ ಬಲು ಜಾಣನೆಂಬೆ ಇನ್ನೇನು ಹೇಳಲಿ ಕಾಲೆಮದೂತರು ಬೆನ್ನ ಕೊಯ್ದು ನರ ತೆಗೆದು ಎಳೆವರೊ || ಹೆಂಡಿರ ಕಂಡು ಹಲ್ಲ ಕಿರಿವೆ ಹಾಕಿದ ಚೌರಿ ಗೊಂಡೆ ರಾಕಟಿ ನೋಡಿ ಬೆರೆವೆ ಅಲ್ಲಲ್ಲಿ ಕಂಡ ಕಂಡ ವಿಷಯಕ್ಕೆ ಮನವಿಡುವೆ ನಿನಗೇನು ಪರಿವೆ ಚಂಡೆಮದೂತರು ಕಂಡೆಳಕೊಂಡು ಹಿಂಡಿಹಿಪ್ಪೆ ಮಾಡಿಸುವರೊ ನಿನ್ನನು || ಬಾಲೇರ ಸುತರ ನಂಬಿದೆಲ್ಲೊ ಮೂಗುತಿಗೊಪ್ಪು- ವಾಲೆ ಮಾಡಿಸಿ ಇಟ್ಟೆಯಲ್ಲೊ ಸಂಪತ್ತು ಸಿರಿ ಬಾಳಿಗೆ ವ್ಯರ್ಥವಾಯಿತಲ್ಲೊ ಕಡೆಗೆ ಬಲ್ಲೊ ಸೀಳುವೆನೆನುತಲಿ ಕಾಲೆಮದೂತರು ನಾಲಿಗೆ ಕೊಯ್ವರೊ ಎಲೆ ಹುಚ್ಚು ಮೂಳ || ನಿನ್ನೊಳು ನೀ ತಿಳಿದು ನೋಡೊ ಗುರುಗಳ ಚರಣ- ವನ್ನೆ ಚೆನ್ನಾಗಿ ಧ್ಯಾನ ಮಾಡೊ ದುರಿತ ಮದಗ- ಳನ್ನೆ ತರಿತರಿದೀಡಾಡೊ ಭಕ್ತರ ಕೂಡೊ ಚೆನ್ನ ಚಿದಾನಂದ ಸ್ವಾಮಿ ಪುರಂದರವಿಠ- ಲನ್ನ ಪದಾಬ್ಜವ ನೆರೆನಂಬಿ ಬದುಕೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು