ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು

ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು

(ಮಧ್ಯಮಾವತಿ ರಾಗ ಆದಿತಾಳ) ಮಾಯೆಯೆನ್ನ ಕಾಯ ಸುತ್ತಿ ಬಾಯ ಹೊಯ್ವುದು ಆಯ ತಪ್ಪಿ ಆಯ ಕೆಟ್ಟ ನ್ಯಾಯ ಬಪ್ಪುದು ||ಪ|| ಹೆತ್ತ ತಾಯಿ ತಂದೆಯನ್ನು ಒತ್ತಿ ಬಯ್ವುದು ಅತ್ತೆಯನ್ನು ಕಂಡ ಹರುಷವಿತ್ತು ನಗುವುದು ಮೃತ್ಯುವನ್ನು ತಂದು ತನ್ನ ಹತ್ತಿರಿಡುವದು ಒತ್ತಿನವನ ಹೊರಗೆ ಸಾರೆನುತ್ತ ನುಡಿವುದು ||೧|| ಗುರುಗಳನ್ನ ಜರೆದು ಕರಕರೆಯ ತಪ್ಪುದು ಕೊರಳು ಕೊಯ್ಕರನ್ನು ತಾನು ಸೆರಗ ಪಿಡಿವುದು ಸಿರಿಯ ತಂದು ಹೊರಗೆ ಇರಿಸಿ ಮರವೆ ತೋರ್ಪುದು ಗರುವತನದಿ ಪರರ ಒಡವೆ ಇರುಳು ಸುಲಿವುದು ||೨|| ದಾನದತ್ತವಾದುದನ್ನು ತಾನು ಸೆಳೆಯುವುದು ಮಾನವನ್ನು ಹಿಡಿದು ಮೇಲೆ ಮಾನ ಇಡುವುದು ಜ್ಞಾನಿಯನ್ನು ಕಂಡು ಮನದಿ ಬೇನೆ ತೋರ್ಪುದು ಅನಾಥರನ್ನು ಕಂಡು ಮನದಿ ಹೀನ ನುಡಿವುದು||೩|| ಅನ್ನವನ್ನು ಇತ್ತವರ ಮುನ್ನ ಬೈವುದು ಭಿನ್ನ ಭೇದ ತೋರಿ ಮನವ ಕನ್ನ ಕೊರೆವುದು ತನ್ನವರ ಮರೆತು ಪರರ ಕನ್ಯೆಗಳುವುದು ಹೊನ್ನ ಬೊಂಬೆಯಂತೆ ಮಾಯೆ ಬೆನ್ನ ಸುಳಿವುದು ||೪|| ತಪ್ಪಿ ನಡೆಯೆ ಈ ಪರಿಯೊಳಿಪ್ಪೆಯೆಂಬುದು ಅಪ್ಪ ವರಾಹ ತಿಮ್ಮಪ್ಪನ ಸೇರಿಕೊಂಬುದು ಒಪ್ಪಿ ತೋರ್ಪ ಮಾಯೆಯೆಲ್ಲ ತಪ್ಪಿ ಪೋಪುದು ಉಪ್ಪರದ ದಾಸ ಪೇಳ ಒಪ್ಪಿಕೊಂಬುದು|| ....ರಚನೆ - ನೆಕ್ಕರ ಕೃಷ್ಣದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು