ಮರೆಯ ಬೇಡ ಮನವೆ ನೀನು

ಮರೆಯ ಬೇಡ ಮನವೆ ನೀನು

(ರಾಗ ಶಂಕರಾಭರಣ ರೂಪಕ ತಾಳ ) ಮರೆಯ ಬೇಡ ಮನವೆ ನೀನು, ಹರಿಯ ಚರಣವ ಅರುಣ ಕಿರಣ ಚರಣ ಶರಣ, ಪಾತಕ ಪಾವನ ||ಪ || ಸಾಧು ಸಜ್ಜನ ಸಂಗವ ಮಾಡಿ, ವೇದ ಶಾಸ್ತ್ರವನೋದು ನೀ ಮೋದದಿಂದಲಿ ವೇದಗಮ್ಯನ ಪಾದಪಂಕಜ ಧ್ಯಾನಿಸೋ || ಸತಿಯು ಸುತರು ಗತಿಯು ಎಂದು, ಮತಿಯು ಕೆಟ್ಟು ತಿರುಗ ಬೇಡ ಮತಿಯು ಕೆಟ್ಟು ಹೋದ ಮೇಲೆ, ಸತಿಯು ಸುತರು ಬರುವರೇನು || ಮಾನುಷಜನ್ಮ ದುರ್ಲಭವಿದು, ಮಾಧವನ ಕೃಪೆಯಲಿ ಬಂದಿದೆ ಹೀನಜನರ ಕೂಡಿ ನೀನು, ಹಾನಿ ಮಾಡಿಕೊಳಲುಬೇಡ || ಪಂಥ ಪಗಡೆಯಾಡಿ ನೀನು, ವ್ಯರ್ಥ ಕಾಲ ಕಳೆಯಬೇಡ ಅಂತಕನ ದೂತರಿಗೆ ಲೇಶ ಕರುಣವಿಲ್ಲವಯ್ಯ || ಯಾಗಯಜ್ಞ ಮಾಡಲೇಕೆ, ಯೋಗಿಯತಿಯು ಆಗಲೇಕೆ ನಾಗಶಯನ ನಾರದವಂದ್ಯನ, ಕೂಗಿ ಭಜನೆ ಮಾಡು ಬೇಗ || ಗೋಪುರದ ಗೊಂಬೆಯಂತೆ, ಗ್ರಾಮ ಗೃಹ ರಕ್ಷಿಪೆನೆಂದು ತಾಪ ಪಡುತ ಹಗಲು ಇರುಳು, ತಾಮಸ ಜನರ ಕೂಡದೆ || ಹರಿಯ ಸ್ಮರಣೆ ಮಾತ್ರದಿಂದ, ಘೋರ ದುರಿತವೆಲ್ಲ ನಾಶ ವರದ ಪುರಂದರವಿಠಲನ, ನಿರತ ಭಜನೆ ಮಾಡು ಬೇಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು