ಮಧ್ವಾಂತರ್ಗತ ವೇದವ್ಯಾಸಾ
----ರಾಗ-ಮಧ್ಯಮಾವತಿ (ದರ್ಬಾರಿ ಕಾನಡಾ) ಆದಿತಾಳ
ಮಧ್ವಾಂತರ್ಗತ ವೇದವ್ಯಾಸಾ , ಮಮ
ಹೃದ್ವನರುಹ ಸನ್ನಿವಾಸ ||ಪ||
ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ
ಚಿದಚಿದ್ವಿಲಕ್ಷಣ ತತ್ಪಾದದ್ವಯಾಬ್ಜವ ತೋರೋ ||ಅ.ಪ||
ಹರಿತೋಪಲಾಭ ಶರೀರ ಮುನಿಪರಾಶರವರ ಸುಕುಮಾರ
ಪರಮಪುರುಷ ಕರ್ತ ಸ್ವರ್ಣಗರ್ಭ ಪ್ರಮುಖ ನಿರ್ಜರ ಮುನಿಗಣನುತ ಪದಪಂಕಜ
ಕುಲಕುಲದಿ ಧೃತರಾಷ್ಟ್ರ ಪಾಂಡುವಿದುರರ ಪಡೆದೈವರಿಗೊಲಿದು ಸಂ-
ಹರಿಸಿ ದುರ್ಯೋಧನನ ಭಾರತ ವಿರಚಿಸಿದ ಸುಧೀಂದ್ರ ಕವೀಂದ್ರ ||೧||
ಬಾದರಾಯಣ ಬಹುರೂಪ ಸನಕಾದಿ ಸನ್ನುತ ಧರ್ಮಯೂಪಾ
ವೇದೋದ್ಧಾರನಾದ ಅನಾದಿಕರ್ತ ಪೂರ್ಣಬೋಧ ಸದ್ಗುರುವರಾರಾಧಿಪದಯುಗ
ಮೇದಿನಿಯೊಳಗೋರ್ವ ಪರಮಾಧಮ ಕೈಪಿಡಿಯೇ ಕರುಣ ಮಹೋ-
ದಧಿಯೆ ಕಮನೀಯ ಕಪಿಲಪ್ರಬೋಧ ಮುದ್ರಾ-ಭಯಂಕರಾಂಬುಜ ||೨||
ಜಾತರೂಪ ಜಟಾಜೂಟ ಶ್ರೀನಿಕೇತನ ತಿಲಕ ಲಲಾಟ
ಪೀತ ಕೃಷ್ಣಾಜಿನ ಶ್ವೇತ ಶ್ರೀ ಯಜ್ಞೋಪವೀತ ಮೇಖಲದಂಡಾನ್ವಿತ ಕಮಂಡಲ
ಭೂತಿ ಕೃತ್ಸದ್ಭೂತಿದಾಯಕ ಶ್ರೀಪತಿ ಜಗನ್ನಾಥವಿಠಲನೆ
ತುತಿಸಬಲ್ಲೆನೆ ಪಾತಕನು ಅಲ್ಪಾತ್ಮಕನು ನಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments