ಮಗನೆಂದಾಡಿಸುವಳು ಜಗದುದರನ್ನ

ಮಗನೆಂದಾಡಿಸುವಳು ಜಗದುದರನ್ನ

(ರಾಗ ಶಂಕರಾಭರಣ ಅಟತಾಳ ) ಮಗನೆಂದಾಡಿಸುವಳು ಜಗದುದರನ್ನ, ಆನಂದದಿ ಗೋಪಿ ||ಪ|| ಕುಕ್ಷಿಯೊಳೀರೇಳು ಜಗವೆಲ್ಲವ ತಾಳಿ ರಕ್ಷಿಸಿಕೊಂಡಿಹ ಬಲವಂತನ ಪಕ್ಷಿವಾಹನ ದೇವ ಅಂಜಿದಂಜಿದನೆಂದು ರಕ್ಷೆಯಿಡುವ ಪುಣ್ಯವೆಲ್ಲಿ ಪಡೆದಳೊ || ಸಾಗರಪತಿಯಾಗಿ ಭೋಗಿ ಶಯನದಲಿ ಯೋಗನಿದ್ರೆಯೊಳಿಪ್ಪ ಆ ಕಂದನ ಆಗಮ ಶ್ರುತಿಗಳು ಅರಸಿ ಕಾಣದ ವಸ್ತು ತೂಗಿ ನೋಡುವ ಪುಣ್ಯವೆಲ್ಲಿ ಪಡೆದಳೊ || ವೇದತತಿಗಳಿಂದ ಬೋಧ ತಪಗಳಿಂದ ಹೋದ ಹೊಲಬನರಿಯದಾತನ ಭೀತಿಯಲಾಡುವ ಮಗನನರಸಿ ವಿ- ನೋದವಾಡುವ ಪುಣ್ಯವೆಲ್ಲಿ ಪಡೆದಳೊ || ಹೊನ್ನ ಮಣೆಯ ಮೇಲೆ ಚಿಣ್ಣನ ಕುಳ್ಳಿರಿಸಿ ಎನ್ನ ಮೋಹದ ಮುದ್ದು ಮಗನೆನುತ ಹೊನ್ನ ತಾ ಗುಬ್ಬಿ ತಾ ಹೊನ್ನ ಗುಬ್ಬಿಯೆಂದು ಚಿಣ್ಣನಾಡಿಪ ಪುಣ್ಯವೆಲ್ಲಿ ಪಡೆದಳೊ || ಬಲಿಯಿತ್ತ ಧಾರೆಯ ಜಲವ ಕರದೊಳಿಟ್ಟು ನೆಲವ ಈರಡಿ ಮಾಡಿದ ದೇವನ ಲಲನೆ ತೊಡೆಯೊಳಿಟ್ಟು ತಲೆಯ ನೇವರಿಸುತ್ತ ಮೊಲೆಯ ಕೊಡುವ ಪುಣ್ಯವಲ್ಲಿ ಪಡೆದಳೊ || ಮಡದಿ ಬಾಲಕನ ನಿಲ್ಲೋ ನಿಲ್ಲೋ ಎಂದು ಬಿಡದೆ ಕೊನೆಬೆರಳಲ್ಲಿ ಕರಪಿಡಿದು ಅಡಿಯಿಡು ಮಗನೆ ದಟ್ಟಡಿಯಿಡು ಇಡು ಎಂದು ನಡೆಯ ಕಲಿಸುವ ಪುಣ್ಯವೆಲ್ಲಿ ಪಡೆದಳೊ || ಒಣಗಿದ ತನು ತಲೆಜಡೆ ಹಣೆಯಲಿ ನಾಮ ಪ್ರಣವ ಜಪದಿ ಮಣಿಮಾಲೆಯನೆಣಿಸಿ ಮುನಿಜನಗಳೆಂದೂ ಅರಸಿ ಕಾಣದವನೊಳ್ ಅಣಕವಾಡುವ ಪುಣ್ಯವೆಲ್ಲಿ ಪಡೆದಳೊ || ಪಶುಪತಿ ಬ್ರಹ್ಮರು ಸುರ ಸಿದ್ಧ ಸಾಧ್ಯರು ವಸುಧೆಯೊಳಗೆ ಬಂದು ಕಾದಿರಲು ಶಶಿಮುಖಿ ಸಾಸಿರ ಪೆಸರುಳ್ಳ ದೇವನಿಗೆ ಪೆಸರಿಡುವ ಪುಣ್ಯವೆಲ್ಲಿ ಪಡೆದಳೊ || ಮಂದಗಮನೆ ಆನಂದದಿ ನಿಟ್ಟಿಸಿ ಕುಂದದೆ ಜಯ ಜಯವೆನುತಿರಲು ಮಂದರಧರ ಪುರಂದರವಿಠಲನ ಬಂದಪ್ಪುವ ಪುಣ್ಯವೆಲ್ಲಿಪಡೆದಳೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು