ಮಂಡೆ ಬೋಳಾದ ಸನ್ಯಾಸಿಯು

ಮಂಡೆ ಬೋಳಾದ ಸನ್ಯಾಸಿಯು

(ರಾಗ ಸೌರಾಷ್ಟ್ರ ಆದಿ ತಾಳ ) ಮಂಡೆ ಬೋಳಾದ ಸನ್ಯಾಸಿಯು ಮನೆ ಬಂದ್ಹೊಕ್ಕನಮ್ಮ ||ಪ|| ಎನ್ನ ಗಂಡನ ಕಿವಿಯೂದಿ ಮರುಳು ಮಾಡಿ ಮನೆಗೊಂಡನಮ್ಮ ||ಅ|| ಮಡಿಯ ಮಾಡಿ ಮೈತೊಳೆದು ನಾವುಣ್ಣಲಾರೆವಮ್ಮ ನಡತೆ ತಪ್ಪಿತೆಂದೊಬ್ಬರು ನಮ್ಮನು ದಂಡಿಸಿದ್ದಿಲ್ಲವಮ್ಮ ನುಡಿಯಲೆಷ್ಟೆಂದ ವೈಷ್ಣವತನ ಬೇಸರವಿಟ್ಟಿತಮ್ಮ ಕಡುಮೂರ್ಖ ಸನ್ಯಾಸಿ ಬಂದಿವ ನೋಡಿರಮ್ಮ || ಮುತ್ತೈದೇರು ನಾವು ಹಣೆತುಂಬ ಕುಂಕುಮ ಇಡುವೆವಮ್ಮ , ನಾವು ಎತ್ತ ಹೋದರೆ ತುತ್ತು ಬುತ್ತಿಯ ಕೊಂಡೊಯ್ದು ಉಂಬೆವಮ್ಮ ತೊತ್ತುಬಂಟರ ನೀರಲ್ಲದೆ ಮತ್ತೊಂದು ಅರಿಯೆವಮ್ಮ , ಈ ಮೃತ್ಯುಸನ್ಯಾಸಿ ಬಂದಿವನೆಲ್ಲ ಬಿಡಿಸಿದ ನೋಡಿರಮ್ಮ || ಬೆಳ್ಳುಳ್ಳಿ ನುಗ್ಗೆಕಾಯಿ ಕವಡಿಕಾಯಿಗಳು ತಿಂಬೆವಮ್ಮ ಮುಲ್ಲಂಗಿ ಪಲ್ಲೆ ಗೆಜ್ಜರಿ ಪುಂಡೆಪಲ್ಲೆವು ಸಾಲದಮ್ಮ ಸುಳ್ಳು ಯಾಕಾಡಲಿ ಗಂಡಸರು ತಂಗಳುಂಬೋರಮ್ಮ ಇಲ್ಲಿಗೆ ಆಯಿತೆಮ್ಮಾಚಾರವೆನಬೇಡಿ ಕೇಳಿರಮ್ಮ || ಏಕಾದಶಿ ದಿನ ಅವರೆ ಗುಗ್ಗುರಿಗಳು ತಿಂಬೆವಮ್ಮ , ಮೇಲೆ ಬೇಕಾದರೆ ನಾಲ್ಕು ದೋಸೆಯ ಮಾಡಿ ತಿಂಬೆವಮ್ಮ ಸಾಕಾಗದಿದ್ದರೆ ಮೊಸರು ಮಜ್ಜಿಗೆಗಳ ಕುಡಿವೆವಮ್ಮ , ಈ ಕಾಕುಸನ್ಯಾಸಿ ಬಂದವನೆಲ್ಲ ಬಿಡಿಸಿದ ನೋಡಿರಮ್ಮ || ಹಸನಾದ ಪರ್ವಕಾಲಗಳಲಿ ಪತಿಸಂಗವಹುದಮ್ಮ ಬಸಿರಾದರು ಎನ್ನ ಪ್ರಸವಾಗೊ ಪರಿಯಂತ ಬಿಡನೇಯಮ್ಮ ಹುಸಿಯೆನ್ನೇಕಾಡಲಿ ಗಂಡಸುತನ ಘಟ್ಯಾಗಿಹುದಮ್ಮ , ಅದರ ದೆಸೆಯಿಂದ ನಾಲ್ಕು ಮಕ್ಕಳು ಬೇಗ ಹಡೆದೆನಮ್ಮ || ದಶಮಿ ಏಕಾದಶಿ ದ್ವಾದಶಿಯೆಂಬೋದು ಅರಿಯೆವಮ್ಮ , ಹರಿ ಹೆಸರಲಿ ಪಕ್ಷಕ್ಕೊಂದುಪವಾಸವರಿಗೆ ದೊರಕಿತಮ್ಮ ವಸುಧೆಯೊಳಗೆ ಮಧ್ವಮತವೆಂಬೋದು ಸಿದ್ಧವಾಯಿತಮ್ಮ ಪುಸಿಯಲ್ಲ ಪುರಾಣ ಪುಣ್ಯಕಥೆಗಳು ಹೆಚ್ಚಿತಮ್ಮ || ಅನ್ಯ ದೇವರಿಗೆ ನೈವೇದ್ಯನಿಟ್ಟುಂಬೋದು ಅರಿಯೆವಮ್ಮ , ಹನ್ನೊಂದು ಕಾಸಾಗಿ ತಾಗೀಗ ಕಾಸು ಹೊನ್ನಾಯಿತಮ್ಮ ನಿನ್ನಾಣೆಲೆ ಸಖಿ ಮೊಗತನ ಕೆಟ್ಟು ಹೋಯಿತಮ್ಮ ಚೆನ್ನ ಪುರಂದರವಿಠಲನ ಭಜಿಸಿದ ಧರ್ಮವಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು