ಭಾಷೆಹೀನರ

ಭಾಷೆಹೀನರ

( ರಾಗ ಮುಖಾರಿ. ಝಂಪೆ ತಾಳ) ಭಾಷೆಹೀನರ ಸಂಗವಭಿಮಾನಭಂಗ ||ಪ|| ಬೇಸತ್ತು ಬೇಲಿಯ ಮೇಲೊರಗಿದಂತೆ ||ಅ|| ಹಸಿವೆಯಾರದೆ ಬೆಕ್ಕು ಹತ್ತಿಯನು ಮೆದ್ದಂತೆ ತೃಷಿವಿಗಾರದೆ ಕೂಪ ತೋಡಿದಂತೆ ಬಿಸಿಲಿಗಾರದೆ ಕೋತಿ ಬಂಡೆ ಮೇಲೆ ಕುಳಿತಂತೆ ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ || ಮಳೆಯ ರಭಸಕ್ಕಂಜಿ ಮರವೇರಿ ಕುಳಿತಂತೆ ಚಳಿಯ ತಾಳದೆ ಜಲದಿ ಮುಳುಗಿದಂತೆ ಹುಳುವಿನ ಭಯಕಂಜಿ ಹುತ್ತದೊಳು ಪೊಕ್ಕಂತೆ ಎಳೆ ನರಿಯು ಒಂಟೆಯ ತುಟಿಗೆ ಜೋತಂತೆ || ಸರಸ ನಾರಿಯ ವೇಷ ಪುರುಷ ನಾರಿಯ ಗಮನ ಬಿಸಿಲುಕುದುರೆಯ ಭಾವ ಎಂದೆನಿಸದೆ ವಸುದೇಶ ಪುರಂದರವಿಠಲನೆ ಕಾಯ್ವ ನಮ್ಮ ಎಸೆವ ನಾಮವ ಭಜಿಸಿ ಸುಖಿಯಾಗೊ ಮನವೆ || ಇನ್ನೊಂದು ಪಾಠ ಹೀಗಿದೆ .... ------------------------------ ಭಾಷೆಹೀನರ ಆಸೆ ಪ್ರಾಣ ಗಾಸಿ ಬೇಸತ್ತು ಬೇಲಿ ಮೇಲೊರಗಿದಂತೆ || ಚಳಿಗೆ ನಡುಗುತ ಪೋಗಿ ಜಲವ ಪೊಕ್ಕಂತೆ ಮಳೆಯ ರಭಸಕೆ ಮರವೇರಿ ಕುಳಿತಂತೆ ಹುಳುವಿನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ ಎಳೆ ನರಿಯು ಒಂಟೆಯ ತುಟಿಗೆ ಜೋತಂತೆ || ಹಸಿವೆಯಾರದೆ ಬೆಕ್ಕು ಹತ್ತಿಯನು ತಿಂದಂತೆ ತೃಷಿಗಾರನವ ತೆವರ ತೋಡಿದಂತೆ ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ || ಹುಸಿಯನಾಡುವರಾಸೆ ಪುರುಷ ನಾರಿಯ ವೇಷ ಬಿಸಿಲುಗುದುರೆಯ ಭಾವ ಒಂದೇ ಕಾಣೊ ಬಿಸಜಾಕ್ಷ ಸಿರಿಪುರಂದರವಿಠಲನ ಎಸೆವ ಪದದ ಸೇವೆ ಪರಮಸುಖವಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು