ಬ್ರಾಹ್ಮಣನೆಂದರೆ

ಬ್ರಾಹ್ಮಣನೆಂದರೆ

( ರಾಗ ಭೈರವಿ. ಆದಿ ತಾಳ) ಬ್ರಾಹ್ಮಣನೆಂದರೆ ಬ್ರಹ್ಮನ ತಿಳಿದವನವನೀಗ ಬ್ರಾಹ್ಮಣನೋ||ಪ|| ಬ್ರಹ್ಮ ಭೇದವೆಂದು ಜಗವನ್ನು ಕಂಡವನವನೀಗ ಬ್ರಾಹ್ಮಣನೋ ||ಅ|| ಮೂಗಲ್ಲಿ ವಾಯು ತುಂಬಿ ಎಳೆಯೋವ ಅವನೀಗ ಬ್ರಾಹ್ಮಣನೋ ನಾಗಸ್ವರನ ಧ್ವನಿ ಕಿವಿಯಲ್ಲಿ ಕೇಳೋವ ಅವನೀಗ ಬ್ರಾಹ್ಮಣನೋ ಬೇಗನೆ ನೆಲೆನೆಲೆ ಆರನ್ನು ಅಡರೋವ ಅವನೀಗ ಬ್ರಾಹ್ಮಣನೋ ವೇಗದಿಂದಲಿ ಚಂದ್ರ ಮಂಡಲದಮೃತವನುಂಡವ ಬ್ರಾಹ್ಮಣನೋ || ಮುತ್ತಿನಂದದಿ ಮಳೆಹನಿ ಉದುರುವಾಗ ತೊಲಗದವ ಬ್ರಾಹ್ಮಣನೋ ಮತ್ತೆ ದ್ವಿದಳದ ಸಿಂಹಾಸನದಲ್ಲಿ ಕುಳಿತವ ಬ್ರಾಹ್ಮಣನೋ ಎತ್ತೆತ್ತ ನೋಡಲು ಸೂಸುಬೆಳದಿಂಗಳು ಕಾಣೋವ ಬ್ರಾಹ್ಮಣನೋ ಉತ್ತಮ ಸಹಸ್ರ ಕಮಲ ಗರಿಕೆಯಲ್ಲಿ ಸೇರೋವ ಬ್ರಾಹ್ಮಣನೋ || ಥಳಥಳಿಸುವ ಬ್ರಹ್ಮರಂಧ್ರವೆ ಸುಖವೆಂದು ಮಲಗುವ ಬ್ರಾಹ್ಮಣನೋ ಬಲು ರವಿ ಶತಕೋಟಿ ಶಿಂಶುಮಾರದಲ್ಲಿ ಸೇರೋವ ಬ್ರಾಹ್ಮಣನೋ ಕಲಿಯುಗದಲಿ ಹರಿ ನಾಮದ ಅಮೃತವನುಂಡವ ಬ್ರಾಹ್ಮಣನೋ ಸುಲಭದಿ ಪುರಂದರವಿಠಲ ರಾಯನ ಸೇರೋವ ಬ್ರಾಹ್ಮಣನೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು