ಬೇಡಲೇತಕೆ ಪರರ ದೇಹಿಯೆಂದು

ಬೇಡಲೇತಕೆ ಪರರ ದೇಹಿಯೆಂದು

-- ರಾಗ - ಕಾಂಬೋಧಿ (ಭೂಪ್ ) ಝಂಪೆತಾಳ ಬೇಡಲೇತಕೆ ಪರರ ದೇಹಿಯೆಂದು ||ಪ|| ನೀಡುವ ದೊರೆ ನಮಗೆ ನೀನಿರಲು ಸರ್ವದಾ ||ಅ.ಪ|| ಗ್ರಾಸವನು ಬೇಡೆ ದೂರ್ವಾಸ ಮುನಿಗನ್ನನಾ- ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾದಾತ ದಾಶರಥೆ ನಿನ್ನ ಬಿಟ್ಟನ್ಯದೇವತೆಗಳನು ||೧|| ಖೂಳ ದುಶ್ಶಾಸನನು ದ್ರೌಪದಿಯ ಸಭೆಯೊಳು ದು- ಕೂಲವನು ಸೆಳೆಯೆ ದ್ವಾರಕಾಮಂದಿರ ಶ್ರೀಲೋಲ ಶ್ರೀಕೃಷ್ಣ ಕರುಣಿಸು ಕರುಣಿಸೆನೆ ಪಾಂಚಾಲಿ ಮೊರೆ ಕೇಳಿ ದಿವ್ಯಾಂಬರನಿಚಯವಿತ್ತೆ ||೨|| ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿ ಅವಲಿಗೆ ಪೊಡವಿಯನ್ನಾಳಿದೆ ಕ್ರಿಮಿಗೊಲಿದು , ಕರುಣದಲಿ ಜಡಜಸಂಭವ ಮೃಡಬಿಡೌಜರೀಪ್ಸಿತ ಕೊಡುತೆ ||೩|| ತಾಪಸೋತ್ತಮ ಮೃಕಂಡಾತ್ಮಜಗೆ ಕಲ್ಪಾಯು ನೀ ಪೂರ್ತಿ ಮಾಡಿ ಅಲ್ಪಾಯು ಕಳೆದೆ ಆ ಪರ್ವತೇಶ್ವರನ ಪಟ್ಟಣವ ಸಾರ್ದ ಸಾಂ- ದೀಪತನಯನ ತಂದ ಸರ್ವಾಂತರ್ಯಾಮಿ ||೪|| ಕಲ್ಪಕಲ್ಪಗಳಲ್ಲಿ ವಿಶ್ವಜೀವರಿಗನ್ನ- ಕಲ್ಪಕನು ನೀನಿರಲು ಭ್ರಾಂತಿಯಿಂದ ಅಲ್ಪ ಮಾನವರಿಗಾಲ್ಪರಿದರೇನಹುದು ಅಹಿ- ತಲ್ಪ ಜಗನ್ನಾಥವಿಠ್ಠಲ ಕಲ್ಪತರುವಿರಲು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು