ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ

( ರಾಗ ಶಂಕರಾಭರಣ. ಆದಿ ತಾಳ)

 

ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮ , ಮಗಳೆ ಮನ-

ಶುದ್ಧನಾಗಿ ಗಂಡನೊಡನೆ ಬಾಳಬೇಕಮ್ಮ ||ಪ||

 

ಅತ್ತೆಮಾವಗಂಜಿಕೊಂಡು ನಡೆಯ ಬೇಕಮ್ಮ, ಮಗಳೆ

ಚಿತ್ತದೊಲ್ಲಭನಕ್ಕರೆಯನು ಪಡೆಯಬೇಕಮ್ಮ

ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ, ಮಗಳೆ

ಹತ್ತು ಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ ||

 

ಕೊಟ್ಟು ಕೊಂಬುವ ನೆಂಟರೊಡನೆ ದ್ವೇಷ ಬೇಡಮ್ಮ, ಮಗಳೆ

ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ

ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ, ಮಗಳೆ

ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ ||

 

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ, ಮಗಳೆ

ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ

ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ, ಮಗಳೆ

ಗುರು ಪುರಂದರವಿಠಲನ ಸ್ಮರಣೆಯ ಮರೆಯಬೇಡಮ್ಮ ||

ದಾಸ ಸಾಹಿತ್ಯ ಪ್ರಕಾರ
ಬರೆದವರು