ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ

ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ

( ರಾಗ ಸೌರಾಷ್ಟ್ರ ಛಾಪು ತಾಳ) ಬಾರೇ ಗೋಪಮ್ಮ ನಿಮ್ಮ ಬಾಲಯ್ಯನಳುತಾನೆ, ಬಾರೇ ಗೋಪಮ್ಮ ||ಪ|| ಆರು ತೂಗಿದರು ಮಲಗನು ಮುರವೈರಿ, ಬಾರೇ ಗೋಪಮ್ಮ ||ಅ|| ನೀರೊಳು ಮುಳುಗಿ ಮೈ ಒರೆಸೆಂದಳುತಾನೆ, ಬಾರೇ ಗೋಪಮ್ಮ ಮೇರುವ ಹೊತ್ತು ಮೈ ಭಾರವೆಂದಳುತಾನೆ, ಬಾರೇ ಗೋಪಮ್ಮ || ಧರಣಿ ಕೋರೆಯಲಿಟ್ಟು ದವಡೆ ನೊಂದಳುತಾನೆ, ಬಾರೇ ಗೋಪಮ್ಮ ದುರುಳ ರಕ್ಕಸನ ಕರುಳ ಕಂಡಳುತಾನೆ, ಬಾರೇ ಗೋಪಮ್ಮ || ನೆಲನನಳೆದು ಪುಟ್ಟ ಬೆರಳು ನೊಂದಳುತಾನೆ, ಬಾರೇ ಗೋಪಮ್ಮ ಛಲದಿಂದ ಕೊಡಲಿಯ ಪಿಡಿದೆಂದಳುತಾನೆ, ಬಾರೇ ಗೋಪಮ್ಮ || ಬಲು ಸೈನ್ಯ ಕಪಿಗಳ ನೋಡೆನೆಂದಳುತಾನೆ, ಬಾರೇ ಗೋಪಮ್ಮ ನೆಲುವಿನ ಬೆಣ್ಣೆಯು ನಿಲುಕದೆಂದೆಳುತಾನೆ, ಬಾರೇ ಗೋಪಮ್ಮ || ಬತ್ತಲೆ ನಿಂತವರ ಎತ್ತಿ ಕೊಳ್ಳೆಂದಳುತಾನೆ, ಬಾರೇ ಗೋಪಮ್ಮ ಉತ್ತಮ ತೇಜಿಯ ಹತ್ತೇನೆಂದಳುತಾನೆ ಗೋಪ್ಯಮ್ಮ || ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ, ಬಾರೇ ಗೋಪಮ್ಮ ದಿಟ್ಟ ಶ್ರೀ ಪುರಂದರವಿಠಲಕೆ ಮೊಲೆ ಕೊಡು, ಬಾರೇ ಗೋಪಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು