Skip to main content

ಫಲಹಾರವನೆ ಮಾಡೋ

ಫಲಹಾರವನೆ ಮಾಡೋ ಪರಮಪುರುಷನೆ
ಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ ||

ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ
ಕೊಬ್ಬಿದ ದ್ರಾಕ್ಷಿ ಹಲಸು ತೆಂಗು
ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು
ಇಬ್ಬದಿಯಲಿ ಇಟ್ಟ ಶೇಷಫಲಂಗಳು ||

ನೆನೆಗಡಲೆ ಬೇಳೆ ಲಡಿಗೆ ಮೂಗದಾಳು*
ಪಾನಕ ಶುಂಠಿ ಬೆಲ್ಲ ಯಾಲಕ್ಕಿಯು
ಗೊನೆಬಾಳೆಹಣ್ಣು ಘೃತವು ನೊರೆಹಾಲು
ಕನಕಪಾತ್ರೆಯೊಳಿಟ್ಟು ಸಕಲಪದಾರ್ಥವ ||

ಧ್ಯಾನಪೂರ್ವಕದಿಂದ ಮಾನಸಪೂಜೆಯ
ಪನ್ನೀರನೆ ಭಕುತವತ್ಸಲನೆ
ಜಾನಕಿರಮಣಗೆ ಷೋಡಶೋಪಚಾರ
ದಾನವಾಂತಕ ಸಿರಿ ಪುರಂದರವಿಠಲ ||

( * ಮೂಂಗ್ ದಾಲ್? )

ದಾಸ ಸಾಹಿತ್ಯ ಪ್ರಕಾರ: 
ಬರೆದವರು: