ಪ್ರಾಚೀನ ಕರ್ಮವು ಬಿಡಲರಿಯದು

ಪ್ರಾಚೀನ ಕರ್ಮವು ಬಿಡಲರಿಯದು

( ರಾಗ ಮುಖಾರಿ. ಝಂಪೆ ತಾಳ) ಪ್ರಾಚೀನ ಕರ್ಮವು ಬಿಡಲರಿಯದು ಯೋಚನೆಯ ಮಾಡಿ ನೀ ಬಳಲ ಬೇಡ || ಪ|| ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬರುತಿರಲು ತನ್ನಿಂದ ತಾನೆ ತಿಳಿಯಲರಿಯದೆ ಇನ್ನು ದೇಹವನು ಆಶ್ರಯಿಸಿ ಫಲವೇನು ಉನ್ನಂತ ಹರುಷದಲಿ ಮನದಿ ಯೋಚಿಸುವ || ಲೋಕಾದಿ ಲೋಕಗಳ ತಿರುಗುವ ರವಿರಥಕೆ ಏಕ ಗಾಲಿಗೆ ಏಳು ಕುದುರೆ ಕಟ್ಟಿ ಆಕಾಶ ಮಾರ್ಗದಲಿ ತಿರುಗುವ ಅರುಣನಿಗೆ ಬೇಕಾದ ಚರಣಗಳ ಕೊಡಲಿಲ್ಲ ಹರಿಯು || ಸೇತುವೆಯ ಕಟ್ಟಿ ಲಂಕೆಗೆ ಹಾರಿ ಹನುಮಂತ ಖ್ಯಾತಿಯನೆ ಮಾಡಿ ರಾವಣನ ಗೆದ್ದು ಸೀತೆಯನು ತಂದು ಶ್ರೀ ರಾಮನಿಗೆ ಕೊಡಲಾಗಿ ಪ್ರೀತಿಯಿಂ ಕೌಪೀನವ ಬಿಡಿಸಲಿಲ್ಲ ಹರಿಯು || ನಿತ್ಯದಲಿ ಗರುಡ ಸೇವೆಯ ಮಾಡಿ ವಿಷ್ಣುವನು ಹೊತ್ತುಕೊಂಡು ಇದ್ದ ಜಗವರಿಯಲು ಅತ್ಯಂತ ಸೇವಕನೆಂದು ಮೂಗಿನ ಡೊಂಕು ಎತ್ತಿ ನೆಟ್ಟಗೆ ಮಾಡಲಿಲ್ಲ ಶ್ರೀ ಕೃಷ್ಣ || ಇಂತೆಂದು ಈ ಪರಿ ತಮ್ಮೊಳಗೆ ತಾವು ತಿಳಿದು ಭ್ರಾಂತನಾಗದೆ ಬಯಕೆಗಳನು ಜರಿದು ಶಾಂತಮೂರುತಿ ಸಿರಿ ಪುರಂದರವಿಠಲನ ಸಂತತದಿ ಬಿಡದೆ ಭಜಿಸೆಲವೊ ಮನುಜ ||
ದಾಸ ಸಾಹಿತ್ಯ ಪ್ರಕಾರ
ಬರೆದವರು