ಪುಟ್ಟಿಸಬೇಡೆಲೊ ದೇವ

ಪುಟ್ಟಿಸಬೇಡೆಲೊ ದೇವ

(ರಾಗ ಸಾವೇರಿ ಛಾಪು ತಾಳ) ಪುಟ್ಟಿಸಬೇಡೆಲೊ ದೇವ ಎಂದೆಂದಿಗು ಇಂಥ ||ಪ|| ಭ್ರಷ್ಟನಾಗಿ ತಿರುಗುವ ಪಾಪಿ ಜೀವನವ ||ಅ.ಪ|| ನರರ ಸ್ತುತಿಸಿ ನಾಲಿಗೆ ಬರಿದು ಮಾಡಿ ಉ- ದರಪೋಷಣೆಗಾಗಿ ಇವರವರೆನ್ನದೆ ಧರೆಯೊಳು ಲಜ್ಜೆ ನಾಚಿಕೆಗಳನೀಡಾಡಿ ಪರರ ಪೀಡಿಸಿ ತಿಂಬ ಪಾಪಿ ಜೀವನವ || ಎಂಟು ಗೇಣು ಶರೀರ ಒಂದು ಗೇಣು ಮಾಡಿ ಕೊಂಡು ಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿ ಗಂಟಲ ಸೆರೆಗಳುಬ್ಬಿ ಕೇಳುವ ಸಂಕಟ ವೈ- ಕುಂಠಪತಿ ನೀನೇ ಬಲ್ಲೆ ಕಪಟ ನಾಟಕನೆ || ಲೆಕ್ಕದಲ್ಲಿ ನೀ ಮೊದಲು ಮಾಡಿದ್ದಲ್ಲದೆ ಒಮ್ಮಾ- ನಕ್ಕಿ ವೆಗ್ಗಳವಾಗಿ ಕೊಡುವರುಂಟೆ ಕಕ್ಕುಲತೆ ಪಟ್ಟರಿಲ್ಲ ಕರುಣಾಳು ನಿನ್ನ ಮೊರೆ- ಹೊಕ್ಕೆನು ಸಲಹೊ ಶ್ರೀ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು