ಪಿಂಡಾಂಡದೊಳಗಿನ ಗಂಡನ ಕಾಣದೆ

ಪಿಂಡಾಂಡದೊಳಗಿನ ಗಂಡನ ಕಾಣದೆ

( ರಾಗ ಧನಶ್ರೀ ಆದಿತಾಳ)

 

ಪಿಂಡಾಂಡದೊಳಗಿನ ಗಂಡನ ಕಾಣದೆ

ಮುಂಡೇರಾದರು ಪಂಡಿತರು ||ಪ||

ಕುಂಡಲಿಶಯನಪದಪುಂಡರೀಕವನು ಹೃ-

ತ್ಪುಂಡರೀಕದೊಳು ಕಂಡು ಭಜಿಸದೆ || ಅ||

 

ಆಧಾರ ಮೊದಲಾದ ಆರು ಚಕ್ರ ಮೀರಿ

ನಾದಬಿಂದು ಕಳೆಯದ ಬಳಿಕ ಶೋಧಿಸಿ

ಸುಧೆಯ ಪ್ರಸಾದವನುಣದೆ

ವಾದಿಸಿ ಸಭೆಯೊಳು ಒಂದನು ತಿಳಿಯದೆ ||

 

ನಾದದೊಳಗೆ ಸುನಾದದಿ ಓಂಕಾರ

ಪದವ ಚಿತ್ತ ಪರಿಣಾಮವಾಗದೆ

ವೇದಾಂತರೂಪ ತದ್ರೂಪ ಚಿದ್ರೂಪವ

ಓದಿಸಿ ಮನದೊಳು ಒಂದನು ಅರಿಯದೆ ||

 

ನವನಾದ ಮಧ್ಯದಿ ಪವನ ಸುತ್ತಿ ಪಣೆ

ಶಿವನ ತ್ರಿಪುಟದಿ ಸ್ಥಿರವಾಗದೆ

ಭವರೋಗ ವೈದ್ಯನ ಧ್ಯಾನವ ಮಾಡಿ

ಸರ್ವಭುಕು ಶ್ರೀಪುರಂದರವಿಠಲರಾಯನ ಸ್ಮರಿಸದೆ ||

ದಾಸ ಸಾಹಿತ್ಯ ಪ್ರಕಾರ
ಬರೆದವರು