ನೋಡಿರಯ್ಯ ಹನುಮಂತನ ಮಹಿಮೆಯ

ನೋಡಿರಯ್ಯ ಹನುಮಂತನ ಮಹಿಮೆಯ

ರಾಗ ಶಂಕರಾಭರಣ/ಚಾಪು ತಾಳ ನೋಡಿರಯ್ಯ ಹನುಮಂತನ ಮಹಿಮೆಯ ಬೇಡಿರೋ ವರಗಳನು || ಪಲ್ಲವಿ || ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ || ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ ಚಂದದಿಂದಪ್ಪನೆಂದು ಅಂದದಿಂ ವಿಶ್ವಾಮಿತ್ರ ತಂದು ರಘುರಾಮನಿಗೊರೆಯಲಂದು ಯಾಗವ ಕಾಯ್ದ ಸುಂದರ ರಾಮನಿಗೆ ವಂದನೆಗೈವನೀತ || ೧ || ಧೀರನಾಗಿ ಧನುವ ಮುರಿದು ಮೆರೆದು ದಂಡಕವ ಸೇರಿ ಘೋರ ರಕ್ಕಸರ ಸದೆದು ಜರಿದು ತಂದು ಕಪಿಪತಿಯೊಡನೆ ಸೇರಿ ಸಖ್ಯವನ್ನೆ ಮಾಡಿ ಧಾರಿಣಿಯೊಳಗೆ ಕಡು ನಾರಿಯನ್ನೆ ಹುಡುಕಿಸಿದ ಧೀರ ರಾಮದೂತನೀತ || ೨ || ಖ್ಯಾತಿಯಿಂದ ಸೇತುವೆಯನು ಕಟ್ಟಿ ಮೆಟ್ಟಿ ರಾವಣ ಪಡೆಯ ಭೂತಳದೊಳು ಕೆಡಹಿಬಿಟ್ಟು ಮಹಾಂತದೊಳು ಈತನೆಂದು ಸೇರಿ ಬಂದು ವಾತತನುಜನೆಮ್ಮ ಬಹು ಪ್ರೀತಿಯಿಂದ ಪುರಂದರವಿಠಲನ್ನ ದಾಸನಾದ || ೩ || ~~~ * ~~~ [ಈ ಪದದಲ್ಲಿ ರಾಮಾಯಣದ ಕತೆ ಸಂಗ್ರಹವಾಗಿ ಬಂದಿದೆ.] ಗಾಡಿಕಾರ - ಉಪಾಯವಂತ, ಜಾದೂಗಾರ; ಗಾರುಡುಕಾರ; ಚೆಲುವ. ಧನುವ - ಸೀತಾಪರಿಣಯಕ್ಕೆ ವೀರ್ಯಶುಲ್ಕವಾಗಿ ಇರಿಸಿದ್ದ ಶಿವಧನುಸ್ಸನ್ನು. ಮೆರೆದು - ಸೀತೆಯನ್ನು ಮದುವೆಯಾಗಿ. ಸದೆದು - ಸದೆ ಬಡಿದು. ಕಪಿಪತಿಯೊಡನೆ - ಸುಗ್ರೀವನೊಡನೆ. ಭೂತಳದೊಳು ಕೆಡಹಿಬಿಟ್ಟು - ಯುದ್ಧದಲ್ಲಿ ರಾವಣನ ಸೇನೆಯನ್ನು ಮಣ್ಣುಗೂಡಿಸಿ. ಮಹಾಂತದೊಳು - ಕಲ್ಪಾಂತದಲ್ಲಿ. [ಪುರಂದರ ಸಾಹಿತ್ಯ ದರ್ಶನ - ಭಾಗ ೨]
ದಾಸ ಸಾಹಿತ್ಯ ಪ್ರಕಾರ
ಬರೆದವರು