ನೀಚನಲ್ಲವೆ ಇವನು

ನೀಚನಲ್ಲವೆ ಇವನು

-------ರಾಗ- ಪಂತುವರಾಳಿ (ಮಾಲಕಂಸ್) ರೂಪಕತಾಳ (ಝಪ್ ತಾಲ್) ನೀಚನಲ್ಲವೆ ಇವನು ನೀಚನಲ್ಲವೆ ||ಪ|| ಕೀಚಕಾರಿಪ್ರಿಯನ ಗುಣವ ಯೋಚಿಸದಲಿಪ್ಪ ನರನು ||ಅ.ಪ|| ಜನನಿ ಜನಕರಂತೆ ಜನಾ- ರ್ದನನು ಸಲಹುತಿರಲು ಬಿಟ್ಟು ಧನಿಕರ ಮನೆ ಮನೆಗಳರಸಿ ಶುನಕನಂತೆ ತಿರುಗುತಿಹನು ||೧|| ಜೀವ ತಾನಕರ್ತೃವೆಂದು ದೇವನೊಬ್ಬ ಕರ್ತೃ ರಮಾ- ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು ||೨|| ಲೋಕವಾರ್ತೆಗಳಲಿ ಏಡ ಮೂಕನಂತೆ ವಿಷಯಗಳವ- ಲೋಕಿಸದಲೆ ಶ್ರೀಶಗಿವು ಪ್ರ- ತೀಕವೆಂದು ತಿಳಿಯದವನು ||೩|| ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು- ಗ್ರಹವ ಮಾಡುಯೆಂದು ಬರಿದೆ ಐಹಿಕಸುಖವ ಬಯಸುವವನು ||೪|| ಶ್ರೀಕಳತ್ರನಂಘ್ರಿ ಕಮಲ- ವೇಕಚಿತ್ತದಲ್ಲಿ ಮನೋ- ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸುವವನು ||೫|| ಹರಿಕಥಾಮೃತವ ಬಿಟ್ಟು ನರಚರಿತ್ರೆಯಿಂದ ದ- ರ್ದುರಗಳಂತೆ ಹಾಳುಗೋಷ್ಠಿ ಹರಟೆ ದಿವಸ ಕಳೆಯುತಿಹನು ||೬|| ವಿಹಿತ ಧರ್ಮ ತೊರೆದು ಪರರ ಗೃಹಗಳಲಿ ಸಂಚರಿಸುತ ಕುಹಕಯುಕ್ತಿಯಿಂದ ಲೋಕ ಮಹಿತರನ್ನು ನಿಂದಿಸುವನು ||೭|| ಕರಣಜನ್ಯ ಪುಣ್ಯಪಾಪ- ವೆರಡು ಹರಿಯಧೀನವೆಂದು ಸ್ಮರಿಸುತ ಅತಿ ಭಕುತಿಯಿಂದ ಹರುಷ ಪಡದಲಿಪ್ಪ ನರನು ||೮|| ವಾತಜನಕನೆನಿಪ ಜಗ- ನ್ನಾಥವಿಠಲ ಪಾದಪದ್ಮ ಪೋತವಾಶ್ರಯಿಸಿ ಭವ ಕು- ವೈತರಣಿಯ ದಾಟದವನು ||೯||
ದಾಸ ಸಾಹಿತ್ಯ ಪ್ರಕಾರ
ಬರೆದವರು